ಅಂತರಂಗದಲಿ ಶ್ರೀಘನಶ್ಯಾಮೆಯ

Category: ಶ್ರೀದೇವಿ

Author: ವಚನವೇದ

ಅಂತರಂಗದಲಿ ಶ್ರೀಘನಶ್ಯಾಮೆಯ
ಆದರಿಸೆಲೆ ಮನವೇ |
ನಮ್ಮಿಬ್ಬರ ಹೊರತಾರೂ ಅರಿಯದ
ರೀತಿಯೊಳವಳೆಡೆ ಸಾಗುವವೇ || ಅಂತರಂಗ....

ಓ ಮನವೇ ನಿನ್ನ ಆಸೆ ಸಾಸಿರವ
ಆಚೆ ನಿಲಿಸಿ ಬಾರೋ | ಬಾಗಿಲಾಚೆ ನಿಲಿಸಿ ಬಾರೋ |
ಏಕಾಂತದಿ ನೀನಾಕೆಯ ಕಾಣಲು
“ಓ ತಾಯಿ” ಎಂದೆನ್ನುವ ರಸನೆಯ
ಮಾತ್ರ ಕರೆದು ತಾರೋ || ಅಂತರಂಗ....

ಕುಟಿಲ ಕುಮಂತ್ರವ ದೂರ ತಳ್ಳಿ ನೀ
ಬಾ ನಮ್ಮನು ನೋಡು |
ಜ್ಞಾನನಯನವನು ಪಹರೆ ನಿಲಿಸಿ ನೀ
ಒಳಗೆ ಬಂದು ಕೂಡೋ ||