ನನ್ನ ಹೃದಯದ ದಿವ್ಯ
Category: ಶ್ರೀದೇವಿ
Author: ವಚನವೇದ
ನನ್ನ ಹೃದಯದ ದಿವ್ಯಸೂತ್ರಧಾರಿಣಿ ನೀನು
ಮಡಿಲ ತೊಟ್ಟಿಲೊಳಿಟ್ಟು ಪಾಲಿಸಿರುವೆ |
ನಾನಪಾತ್ರನು ತಾಯಿ, ನಿನ್ನ ಒಲವಿನ ಕೃಪೆಗೆ
ಆದರೂ ಎನಿತೊಂದು ಕರುಣೆ ನಿನಗೆ ||
ನನ್ನ ಮೇಲೆನಿತೊಂದು ವಾತ್ಸಲ್ಯವಿದೆ ನಿನಗೆ
ನೇವರಿಸಿ ಕೈಹಿಡಿದು ನಡೆಸುತಿರುವೆ |
ಮೃದುನುಡಿಗಳಮೃತವನು ಕಿವಿಗಳಿಗೆ ಕರೆಯುತ್ತ
ದಿವ್ಯಮಧುವನು ನನಗೆ ಕುಡಿಸುತಿರುವೆ ||
ದೋಷವರಸದ ಹಿರಿಯ ತಾಯ್ತನದ ಮೂರ್ತಿ ನೀ
ಕಷ್ಟಸಂಕಟದಿಂದ ರಕ್ಷಿಸಿರುವೆ |
ನಾನು ನಿನ್ನವನೆಂಬ, ನೀನು ನನ್ನವಳೆಂಬ
ಹಿರಿಯ ತತ್ವವನೀಗ ಅರಿಯುತಿರುವೆ ||
ಓ ತಾಯಿ ನಾ ನಿನ್ನ ಹಾಲುಂಡು ಪುಷ್ಟಿಯಲಿ
ನಿನ್ನ ಆಣತಿಯಂತೆ ಋಜುಪಥದಲಿ |
ನಡೆನಡೆದು ಭಕ್ತಿಯಲಿ 'ಜೈ ಬ್ರಹ್ಮಮಯಿ' ಎಂದು
ಹಾಡಿ ಕುಣಿಯುವೆನಿನ್ನು ದಿನದಿನದಲಿ ||