ದಯವಿರಲಿ ಎನ್ನಲ್ಲಿ ಧರಣಿಧರನೆ
Category: ಶ್ರೀಕೃಷ್ಣ
Author: ವಿಜಯದಾಸ
ದಯವಿರಲಿ ಎನ್ನಲ್ಲಿ ಧರಣಿಧರನೆ
ಭಯಗಳನು ಪೋಗಾಡು ಭಕ್ತಜನ ಪ್ರೀಯಾ
ಎರಗಿಸುವದು ಚರಣದಲಿ ಶಿರಸು
ಎರಗಲಿ ನಿನ್ನ ಧ್ಯಾನದಲಿ ಮನಸು
ಎರವೆರವು ಮಾಡದಲೆ ನಿನ್ನ ನಾಮಾಮೃತವ
ಎರದು ಸಾಕುವದು ಸಂತತ ಎನ್ನ ಬಿಡದೆ ||1||
ಮತಿಗೆಟ್ಟ ಮಾನವಗೆ ಗತಿ ನೀನೆ ಆವಾವಾ
ಶ್ರುತಿಗಳೊಳು ಪೇಳುತಿದೆ ವರದೊರದೂ
ಕ್ಷಿತಿಯೊಳಗೆ ರವಿ ಶಶಿಯ ಗತಿ ತಪ್ಪಿದರೇನು
ಪತಿತ ಪಾವನ ನಿನ್ನ ಕೃಪೆಗೆ ಎಣೆಗಾಣೆ ||2||
ಕೊಡುವಲ್ಲಿ ಕೊಳುವಲ್ಲಿ ಯಡಿಯಡಿಗೆ ಭಕುತಿರಸ
ಕುಡಿಸುವಲಿ ಕಲಕಾಲ ಸಂತೋಷವ
ಬಡಿಸಿ ಪೊರೆವಲ್ಲಿ ನಿನಗಾವಲ್ಲಿ ಸರಿಗಾಣೆ
ಮೃಡನೊಡಿಯಾ ಸಿರಿ ವಿಜಯವಿಠ್ಠಲ ತಿರುಮಲೇಶಾ ||3||