ದಾಸ ದಾಸ ದಾಸರ ದಾಸ್ಯವ

Category: ಶ್ರೀಕೃಷ್ಣ

Author: ವಿಜಯದಾಸ

ದಾಸ ದಾಸ ದಾಸರ ದಾಸ್ಯವ ಕೊಡೊ-
ದೋಷ ರಾಸಿಯಳಿದು
ಶ್ರೀಶ ಧೀಶ ಸರ್ವೇಶ ಸುರೇಶ್ವರ -
ಭಾಸುರ ಗುಣಗಣ ಭವ್ಯ ಶರೀರ

ಚಿತ್ತ ನಿನ್ನ ಪದ ಸೇವೆಯೊಳಿರಲಿ-ಚಿಂತೆ ಇತರ ಬಿಡಲಿ
ಅಂತರಂಗದಲ್ಲಾನಂದಿಸಲಿ-ಅಹಂಕೃತಿಯನ್ನೆ ಬಿಡಲಿ
ಸಂತತ ನಿನ್ನ ಪದ ಪಂಕಜ ಭಕ್ತರ -
ಪಂಥವ ಪಾಲಿಸೊ ಪರಮ ಪುರುಷ ಹರಿ ||1||

ಅರಿಷಡ್ವರ್ಗಗಳಟವಿಯ ಖಂಡಿಸು-ಆನಂದದಲಿರಿಸು
ದುರುಳರ ಸಂಗವ ದೂರ ಮಾಡಿಸು-
ದುರ್ಮತಿಯನೆ ಬಿಡಿಸು
ಸರಸ ಸಂಭ್ರಮ ಸನ್ನುತ ಭಕುತರೋಳ್-
ನಿರುತವು ನಿಲ್ಲಿಸೋ ನೀರಜಾಕ್ಷ ಹರಿ||2||

ತ್ರಿಜಗನ್ಮೋಹನಾಕಾರ ತ್ರಿ-ಗುಣಾತೀತ ತೀರ್ಥಪಾದ
ಭಜಕರ ಪಾವನ ಭವನುತ ಚರಣ-ಋಜಗಣನುತಾಭರಣ
ವಿಜಯವಿಠ್ಠಲಾಧೀಶ ವಿಶ್ವೇಶ್ವರ ಕುಜನ
ವಿದಾರಣ ಕೋವಿದನುತ ಹರಿ ||3||