ಧ್ರುವ ತಾಳ ದಾಸ ನಿನಗೆ ನಾನು ಲೇಸಿನವನೆಂದು

Category: ಶ್ರೀಕೃಷ್ಣ

Author: ವಿಜಯದಾಸ

ಧ್ರುವ ತಾಳ
ದಾಸ ನಿನಗೆ ನಾನು ಲೇಸಿನವನೆಂದು
ಆಶೆಯಿಂದಲಿ ಗತಿ ಬೇಡಲಿಲ್ಲ
ದಾಸತನ ಎನಗೆಲ್ಲಿಹುದು ಶ್ರೀನಿ-
ವಾಸನೆ ಅನಂತ ಕಲ್ಪದಲ್ಲಿ

ದಾಸನು ನಾನಲ್ಲ ನಾನಾ ಸುಬುದ್ಧಿಯ
ನಾಶನ ಮಾಡಿಕೊಂಬ ದಾಸ ನಾನು
ದಾಸನೆನಿಸಿಕೊಂಡು ತಿರುಗುವ ಜನಕ್ಕೆ
ಲೇಸಾಗಿ ದಂಡಿಸಿ ಮೆದಿಯ ಬೇಕು
ಕೇಶವ ವಿಜಯವಿಠ್ಠಲನೆ ನಿನ್ನ ಮರೆದು
ಗ್ರಾಸಕ್ಕೆ ತಿರುಗುವ ಭಾಸಮಾನ ದಾಸ ||1||

ಮಟ್ಟತಾಳ
ತಿರಕದಾಸ ನಾನು ಹರಕ ದಾಸ ನಾನು
ಕರಕರಿಯನು ಮಾಡಿ ಪರರ ಪೀಡಿಸಿ, ಉ-
ದರ ಪೊರೆವ ದಾಸನು ನಾನು, ಬರಿಯ ದಾಸ ನಾನು
ಅರಿಮರ್ದನ ಹರಿ ವಿಜಯವಿಠ್ಠಲ ನಿನ್ನ
ಪರಮ ಭಕ್ತನೆಂದು ತಿರಿದುಣ್ಣ ಮೆಚ್ಚಿದೆನು ||2||

ತ್ರಿವಿಡಿ ತಾಳ
ಕೊಟ್ಟರೆ ಹರಸುವೆನು, ಕೊಡದಿದ್ದರೆ, ಬೆರ
ಳಿಟ್ಟು ಬಗಳುವಂಥ ಭ್ರಷ್ಟ ದಾಸನು ನಾನು
ಸೃಷ್ಟಿಯೊಳಗೆ ಬಹು ಧನವಂತರ ಮನೆಯ
ಮೆಟ್ಟು ಕಂಡರೆ ಬಿಡದಿಪ್ಪ ದಾಸ ನಾನು
ನಷ್ಟ ವಾಗಿದ್ದ ಉಚ್ಛಿಷ್ಟ ದಾಸನು ನಾನು
ದೃಷ್ಟಿಯಿಂದಲಿ ನೋಡೊ, ವಿಜಯವಿಠ್ಠಲ ಕೇಳೊ
ಎಷ್ಟೊ ಕಾಲದ ಪಾಪಿಷ್ಠ ದಾಸನು ನಾನು ||3||

ಅಟ್ಟತಾಳ
ಕುರುಡ ದಾಸನು ನಾನು ಕುಂಟ ದಾಸನು ನಾನು
ಹುರಡಿಗೆ ಮಾಡುವ ಹುರಳಿಲ್ಲದ ದಾಸ
ಸರಿಯವರನು ಕಂಡು ಮರಗುವ ದಾಸನು
ಎರಡು ಕಡೆ ಕೆಟ್ಟ ಭರಡಿ ದಾಸನು ನಾನು
ನರಕಾರಿ ವಿಜಯವಿಠ್ಠಲರೇಯ ಪರರ ವಾ
ಗರಕೆ ಕರದಾರೆ ಹಿಗ್ಗುವ ದಾಸನು ನಾನು|| 4||

ಆದಿತಾಳ
ಹೀನ ದಾಸನು ನಾನು, ನೀಚ ದಾಸನು ನಾನು
ಹಾನಿವೃದ್ಧಿಗಳೆಲ್ಲ ತಿಳಿಯದ ದಾಸನು
ನಾನಾ ದುಷ್ಕರ್ಮ ಮಾಳ್ಪ ದಾಸನೊ ನಾನು
ಮಾನವಿಲ್ಲದೆ ಅಪಮಾನ ದಾಸ ನಾನು
ದಾನ ಧರ್ಮವಿಲ್ಲದ ಹೀನ ದಾಸನು ನಾನು
ಅನಂತ ಜನನಕ್ಕೆ ಹೊಲೆದಾಸನು ನಾನು
ಶ್ರೀನಿವಾಸ ತಿರುಮಲೇಶ ವಿಜಯವಿಠ್ಠಲ
ಬ್ಯಾನೆ ಇದ್ದಲ್ಲಿ ಬಿಡುವ ಬಕ್ಕದಾಸನು ನಾನು ||5||

ಜತೆ
ಹೊಟ್ಟೆಕಿಚ್ಚಿನ ದಾಸ-ಹಲುಬಿ ಪೋಗುವ ದಾಸ
ದಟ್ಟದಾರಿದ್ರ ದಾಸನು ವಿಜಯವಿಠ್ಠಲರೇಯ ||6||