ದಾಸರ ಭಾಗ್ಯವಿದು ಪುರಂದರ
Category: ಇತರೆ
Author: ವಿಜಯದಾಸ
ದಾಸರ ಭಾಗ್ಯವಿದು-ಪುರಂದರ-ದಾಸರ ಭಾಗ್ಯವಿದು
ಸರ್ವ-ದೇಶದೊಳು ತುಂಬಿ ಸೂಸುತಲಿದೆ
ಭೂಸುರ ಜನುಮದಿ ಬಂದು ಬೆಳೆದು ಉಪ-
ದೇಶಗೊಂಡು ಮಧ್ವಮತ ಪೊಂದಿ
ಲೇಸಾಗಿ ಭಕ್ತಿ ವಿರಕ್ತಿಜ್ಞಾನದ ವಿ-
ಶೇಷವಾಗಿ ನಾ ಬಾಳುವದೆಲ್ಲ ||1||
ಸಜ್ಜನ ಸಂಗತಿ ಮಾಡಿ ದುರುಳಜನ
ವರ್ಜನಗೈದು ಸತ್ಕರ್ಮಗಳ
ಆರ್ಜಿಸಿ ನಾಮ ಮುದ್ರೆ ಹಗಲು ಇರಳು ನಿ
ರ್ಲಜ್ಜನಾಗಿ ನಾ ಬಾಳುವುದೆಲ್ಲ ||2||
ಶ್ರವಣ ಕೀರ್ತನೆ ವಂದನೆ ಸ್ತೋತ್ರ ಹರಿನಾಮ
ತವಕದಿಂದ ನುಡಿಯುವ ಕವನ
ನವನವ ವಚನವು ಮಂತ್ರ ಸಂಕಲ್ಪವು
ಸವಿದು ಸ್ಮರಿಸಿ ನಾ ಬಾಳುವುದೆಲ್ಲ ||3||
ಯಾತ್ರೆ ತೀರ್ಥ ದಿವ್ಯ ದಾನಧರ್ಮಂಗಳು
ಕ್ಷೇತ್ರ ಮೆಟ್ಟಿ ಬಹ ಸಂಭ್ರಮವು
ಮಿತ್ರರ ಕೂಡಾಡಿ ಹರಿಪರನೆಂದು ಸ-
ತ್ಪಾತ್ರನಾಗಿ ನಾ ಬಾಳುವುದೆಲ್ಲ ||4||
ಹರಿದಿನದುಪವಾಸ ಜಾಗರಣೆ ಪಾರಣಿ
ಗುರು ಹಿರಿಯರಲಿ ವಿಹಿತಸೇವೆ
ಹಿರಿದಾಗಿ ಮಾಡೋಡು ಪರಿಪರಿಯಿಂದಲಿ
ಹರುಷದಿಂದಲಿ ನಲಿದಾಡುವುದೆಲ್ಲ ||5||
ಷಡುರಸಭೋಜನ ದಿವ್ಯವಸನ ನಿತ್ಯ
ಉಡುವುದು ಹೊದೆವುದು ಹಸನಾಗಿ
ತಡೆಯದೆ ಜನರಿಂದ ಪೂಜೆಗೊಂಡು ಸುಖ-
ಬಡಿಸುತಿರುವ ವಿಚಿತ್ರಗಳೆಲ್ಲ ||6||
ಮನವೆ ಹಿಗ್ಗದಿರು ಹಿಯ್ಯಾಳಿಕೆಯಿಂದ
ಗುಣಿಸಿಕೊ ಸುಖವಾವುದು ಲೇಶ
ನಿನಗೆ ಸ್ವತಂತ್ರ ಎಂಬುದು ಕಾಣೆನೆಂದಿಗು
ಗುಣನಿಧಿ ವಿಜಯವಿಠ್ಠಲನ ಪ್ರೇರಣೆಯೆಲ್ಲ ||7||