ದುರಿತ ದುರ್ಗತಿಗೆ ಆವಾನಂಜನೊ

Category: ಶ್ರೀಕೃಷ್ಣ

Author: ವಿಜಯದಾಸ

ದುರಿತ ದುರ್ಗತಿಗೆ ಆವಾನಂಜನೊ
ಹರಿಯ ಕರುಣವೆಂಬ ಕವಚ ತೊಟ್ಟಿರಲಿಕ್ಕೆ

ಮಲಗಿ ಹೊರಳನೇಕೆ ಕುಳಿತುಕೊಂಡಿರನೇಕೆ
ಬಲುದೂರ ತಿರುಗಾಡಿ ಬಪ್ಪನೇಕೆ
ಮಲಿನ ವಸನವ ಪೊದ್ದು ಮೋರೆ ತೊಳಿಯನೇಕೆ
ಜಲಜನಾಭನ ಪಾದ ನೆಳಲು ಸೇರಿದವ ||1||

ಸ್ನಾನ ಸಂಧ್ಯಾ ಮೌನ ಮಾಡದೆ ಇರನೇಕೆ
ಕಾನನದಲಿ ಬಂದು ಸೇರನೇಕೆ
ದಾನ ಧರ್ಮಂಗಳ ಮಾಡದೆ ಇರನೇಕೆ
ದಾನವಾರಿಯ ಕಾಣುತಲಿಪ್ಪವ ||2||

ಮಡಿ ಉಡದೆ ಉಣನೇಕೆ ಅಡಿಗೆ ನೇಮನವೇಕೆ
ಅಡಿಗಡಿಗೆ ಜಪಮಣಿ ಎಣಿಸನೇಕೆ
ನಡೆಯುತ ಪಥದೊಳು ತಿನ್ನಲ್ಲಾ ಮೆಲ್ಲನೇಕೆ
ಪೊಡವೀಶ ಶ್ರೀ ಹರಿಯ ಅಡಿಗಳ ಬಲ್ಲವಾ ||3||

ಓದದೆ ಇರನೇಕೆ ವೇದ ಪಠಿಸನೇಕೆ
ವೇದಮಂತ್ರ ರಚಿಸದರನೇತಕೆ
ಓದನವೀಯದೆ ಬಾಳುತಲಿ ಇರನೇಕೆ
ಮಾಧವನ ಚರಣಾರಾಧನೆ ಮಾಳ್ಪ ||4||

ತೀರ್ಥ ತಿರುಗನೇಕೆ ಯಾತ್ರಿ ಚರಿಸನೇಕೆ
ವ್ಯರ್ಥ ದಿವಸವೆಂದು ಅನಿಸಲೇಕೆ
ಆರ್ಥಿಯನ್ನು ನೋಡಿ ಆಟ ಆಡುವನೇಕೆ
ತೀರ್ಥಪದನ ದಿವ್ಯತೀರ್ಥ ಬಯಸುವವ ||5||

ವ್ರತವು ಮಾಡನೇಕೆ ಕಥಿಯ ಕೇಳನೇಕೆ
ಸತಿಯ ಸಂಗಡ ನಿತ್ಯರಮಿಸನೇಕೆ
ಚತುರ ಸಾರೆ ಉಂಡು ಹಾಗೇ ಇರನೇಕೆ
ಪತಿತಪಾವನನಂಘ್ರಿ ಮತಿಯಲ್ಲಿ ನೋಳ್ಪನಾ||6||

ದುರಿತವೆಂಬೋದೆಂತು ಬಿಳಿದೊ ಹಸರೊ ಕೆಂಪೊ
ಕರದೊ ಮತ್ತಾವದೋ ಅದರ ವರ್ಣಾ
ದುರಿತಾರಿ ವಿಜಯವಿಠ್ಠಲನ್ನದಾಸಗೆ ತನ್ನ-
ತೊರೆದು ಕಾಣೊ ಹಣೆ ನೋಡದೆ ಮಹಾ ||7||