ಧ್ಯಾನವನು ಮಾಡು ಬಿಂಬ ಮೂರುತಿಯ

Category: ಶ್ರೀಕೃಷ್ಣ

Author: ವಿಜಯದಾಸ

ಧ್ಯಾನವನು ಮಾಡು ಬಿಂಬ ಮೂರುತಿಯ
ಆನಂದದಲಿ ಕುಳಿತು ಅಂತರಂಗದಲಿ

ಸದಾಚಾರನಾಗಿ ದ್ವಾದಶಗುರುಗಳಿಗೆರಗಿ
ಮುದದಿಂದ ಮೂಲಮಂತ್ರವನು ಜಪಿಸಿ
ಸದಮಲ ಭಕುತಿಯಲಿ ದೇಹಸ್ಥಿತಿಯನೆ ತಿಳಿದು
ಪದಮಾಸನವ ಹಾಕಿ ಪರಮ ವಿಶ್ವಾಸದಲಿ||1||

ಅಂಗವನು ಚಲಿಸದೆ ಚೆನ್ನಾಗಿ ದೃಢವಾಗಿ
ಕಂಗಳನೆ ಮುಚ್ಚಿ ಇಂದ್ರಿಯಗಳನೆ ತೆರೆದು
ಮಂಗಳ ಶೋಭಿತ ಅಖಂಡ ಧ್ಯಾನದಂತ
ರಂಗದೊಳಗೆ ನಿಲಿಸಿ ಎಲ್ಲವನು ಕಾಣೊ ||2||

ಭಗವದ್ರೂಪಗಳೆಲ್ಲ ಒಂದು ಬಾರಿ ಸ್ಮರಿಸಿ
ಮಗುಳೆ ಪರಮ ಗುರುವಿನ ಮೂರ್ತಿಗೆ
ತೆಗೆದು ಆಹ್ವಾನಮಾಡಿ ಅಲ್ಲಿಂದ ಹರುಷದಿ
ಸ್ವಗುರು ಬಿಂಬಮೂರ್ತಿಯಲಿ ಐಕ್ಯವನೆ ಮಾಡು||3||

ತಿರುಗಿ ಮೆಟ್ಟಿಕೆ ಮೂರು ವೇಗದಿಂದಲಿ ನಿನ್ನ
ಲ್ಲಿರುವ ಮೂರ್ತಿಯಲ್ಲಿ ಚಿಂತನೆಯ ಮಾಡೊ
ಭರದಿಂದ ಎಲ್ಲವನು ತಂದು ಹೃದಯದಲ್ಲಿ
ಸ್ಥಿರವಾಗಿ ಇಪ್ಪ ಮೂರುತಿಯೊಡನೆ ಕಲೆಸು ||4||

ಆತನೆ ಬಿಂಬ ಮೂರುತಿಯೆಂದು ತಿಳಿದುಕೊ
ಆ ತರುವಾಯ ನಾಡಿಗಳ ಗ್ರಹಿಸಿ
ಆ ತೈಜಸನ ತಂದು ವಿಶ್ವಮೂರ್ತಿಯಲ್ಲಿ
ಪ್ರೀತಿಯುಳ್ಳವನಾಗಿ ಪತಿಕರಿಸು ಮರುಳೆ ||5||

e್ಞÁನ ಪ್ರಕಾಶದಲಿ ಇದ್ದು ನಿನ್ನ ಹೃದಯ
ಸ್ಥಾನದಲ್ಲಿ ಅಷ್ಟದಳ ಕಮಲ ಮಧ್ಯ
ಶ್ರೀನಿವಾಸನ ಮೂರ್ತಿ ನಿಲ್ಲಿಸಿ ಬಾಹ್ಯದಲಿ
ಏನೇನು ಪೂಜೆಯನು ಉಳ್ಳದನು ಮಾಡೊ||6||

ಗುಣ ನಾಲ್ಕರಿಂದಲಿ ಉಪಾಸನವನೆ ಮಾಡು
ಕ್ಷಣ ಕ್ಷಣಕೆ ಹರಿಪಾದವನು ನೋಡುತ
ಅಣುರೇಣು ಚೇತನಾಚೇತನಕೆ ನೇಮಕ
ಫಣಿಶಯನನಲ್ಲದೆ ಮತ್ತೊಬ್ಬರಿಲ್ಲವೆಂದು ||7||

ಮಮತೆಯನು ತೊರೆದು ಮೇಲೊಂದಪೇಕ್ಷಿಸದೆ
ಸಮ ವಿಷಮ ತಿಳಿದೊಂದೆ ಭಕುತಿಯಲ್ಲಿ
ಸ-ಮಾಧಿಗೊಳಗಾಗಿ ದಿವ್ಯ ದೃಷ್ಟಿಲಿ ಸರ್ವ
ಕ್ರಮ ಅನುಕ್ರಮದಿಂದ ಭರಿತಭಾವುಕನಾಗೊ ||8||

ಈ ಪರಿ ಧೇನಿಸಲು ದೇವ ಕರುಣನ ಮಾಡೆ
ಪಾಪ ಸಂಚಿತವು ಪ್ರಾರಬ್ಧ ನಾಶ
ಅಪರೋಕ್ಷಿತನಾಗಿ ತನ್ನ ಯೋಗ್ಯತದಷ್ಟು
ಗೋಪಾಲ ವಿಜಯವಿಠ್ಠಲನೊಲಿವನಾಗ||9||