ಧ್ಯಾನಿಸು ಶ್ರೀಹರಿಯ ಧ್ಯಾನಿಸು

Category: ಶ್ರೀಕೃಷ್ಣ

Author: ವಿಜಯದಾಸ

ಧ್ಯಾನಿಸು ಶ್ರೀಹರಿಯ ಧ್ಯಾನಿಸು
ಧ್ಯಾನಿಸು ಮನವೆ ಶ್ರೀ ಹರಿಯ ಪಾದ
ಧ್ಯಾನವಂತರ್ಯಾಮಿ ಹರಿಯ, ಆಹ
ಪ್ರಾಣಾಪಾನ ವ್ಯಾನೋದಾನ ಸಮಾನರ್ಗೆ
ಪ್ರಾಣನಾಗಿಹ ಮುಖ್ಯ ಪ್ರಾಣಾಂತರ್ಗತನ

ಪರಮಾಣು ಪ್ರದೇಶದಲ್ಲಿ, ಪ್ರಾಣಿ
ರಾಸಿ ಅನಂತವುಂಟಲ್ಲಿ ಹೀಗೆ
ವರಲುತಿದೆ ವೇದದಲ್ಲಿ ದೃಷ್ಟಾಂ
ತರವ ಪೇಳುವೆ ದೃಢದಲ್ಲಿ-ಆಹ
ಪರಮ ಸೂಕ್ಷ್ಮ ವಟತರು ಫಲದಲ್ಲಿಹ
ಪರಿಮಿತಲ್ಲದ ಬೀಜದಿರವನರಿತು ನಿತ್ಯ ||1||

ನಿರುತ ಸುವರಣ ಬ್ರಹ್ಮಾಂಡದಲ್ಲಿ
ಪರಿಪೂರ್ಣವಾಗಿ ಅಖಂಡವಾಗಿ
ಮೆರೆವುತಲಿಪ್ಪ ಮಾರ್ತಾಂಡ ದಿವ್ಯ
ಕಿರಣದಂತಿರುವ ಪ್ರಚಂಡ-ಆಹ
ಹೊರಗೆ ಒಳಗೆ ಹರಿ ಚರಿಸುವ ಪರಿಯ ನೀ
ನರಿತು ಆವಾಗಲು ದೊರಕಿದ ಸ್ಥಳದಲ್ಲಿ ||2||

ಸಲಿಲ ಭೂಗಿರಿ ಲತೆ ನಾನಾ-ವೃಕ್ಷ
ಫಲ ಮೃಗ ಪಕ್ಷಿ ಕಾನನ-ಮುಕ್ತ
ಸ್ಥಳಗಳವ್ಯಾಕೃತ ಗಗನ, ತೃಣ-
ಜಲ ಪಾವಕ ತರು ಪವನ-ಆಹ
ಒಳಗೆ ಹೊರಗೆ ಎಲ್ಲ ಸ್ಥಳದಲ್ಲಿ ಹರಿಮಯ
ನೆಲೆಯ ನೀ ನಲವಿಂದ ತಿಳಿದು ಆವಾಗಲು||3||

ಕೇಶವ ವಿಶ್ವ ಮತ್ಸ್ಯಾದಿ, ತೇಜೊ
ರಾಶಿ ಹಯಗ್ರೀವಾದಿ, ಜೀವ
ರಾಶಿಯೊಳಿದ್ದು ಅನಾದಿ ಸರ್ವ
ದೇಶ ಭೇದಿಸುವಂಥ ವೇದಿ-ಆಹ
ಈ ಸಮಸ್ತ ಮೂರ್ತಿ ಶ್ರೀಶ ರಂಗನೆಂದು
ವಾಸನಾ ಮಯದಿಂದ ನೀ ಸೇವಿಸುತ ನಿತ್ಯ ||4||

ಸಪ್ತಾವರಣ ದೇಹದಲ್ಲಿ, ದಶ
ಸಪ್ತ ದ್ವಿಸಹಸ್ರ ನಾಡಿಯಲಿ, ದಶ
ಸಪ್ತ ದ್ವಿಸಹಸ್ರ ರೂಪದಲಿ ಹರಿ
ವ್ಯಾಪ್ತ ನಿರ್ಲಿಪ್ತ ಸ್ಥಾನದಲಿ-ಆಹ
ಆಪ್ತನಂತಿಪ್ಪ ಸುಷುಪ್ತಿ ಜಾಗರದೊಳು
ತಪ್ತ ಕಾಂಚನದಂತೆ ದೀಪ್ತಿಸುತಿಪ್ಪನ್ನ||5||

ಜೀವರಿಂದತ್ಯಂತ ಭೇದ, ಪ್ರತಿ
ಜೀವಾಂತರದಲ್ಲಿ ಮೋದನಾಗಿ
ಯಾವಾಗಲಿರುತಿಹ ವೇದ-ದಲ್ಲಿ
ಪೇಳುವುದು ಸತ್ಯಂಭಿದಾ-ಆಹ
ಈ ವಿಧ ವೇದಾರ್ಥ ಸಾವಧಾನದಿ ತಿಳಿದು
ಶ್ರೀ ವಾಯುಮತದ ಸುಕೋವಿದರೊಡಗೂಡಿ ||6||

ಶ್ರೀಕೇಶವನೆ ಮೂಲರಾಶಿ, ಶ್ರುತಿ-
ಏಕೋ ನಾರಾಯಣ ಆಸೀತ್ ನಾನಾ
ಲೋಕ ಸೃಷ್ಟಿಪ ಧಾತನಾಸೀತ್, ಜಗ
ದೇಕತಾರಕ ಉಪದೇಶೀ-ಆಹ
ನೀ ಕೇಳಿ ನಿಗಮಾರ್ಥ ನೀಕರಿಸು ಸಂಶಯ
ಏಕಮೇವ ದ್ವಿತಿಯ ಶ್ರೀಕೃಷ್ಣನಂಘ್ರಿಯ ||7||

ಗಂಗಾಜನಕ ಸಿರಿರಂಗ ಉ-
ತ್ತುಂಗ ಗುಣಾಂತರಂಗ, ಕಾ
ಳಿಂಗ ಸರ್ಪನ ಮದಭಂಗ, ಭು
ಜಂಗಶಯನ ಅಮಲಾಂಗ-ಆಹ
ಮಂಗಳ ಇಡಾ ಪಿಂಗಳ ಸುಷುಮ್ನ
ಸಂಗಡ ಮಧ್ಯದಿ ತಿಂಗಳಂತಿಪ್ಪನ್ನ ||8||

ಹೃದಯಸ್ಥಾನದಲಿದ್ದ ಮೂರ್ತಿ, ಬಲು
ಅದುಭುತಾತನ ದಿವ್ಯಕೀರ್ತಿ, ಅದು
ಪದುಮುಜಾಂಡದಿ ಪರಿಪೂರ್ತಿ ತರು
ವುದಕೆ ಬೇಕು ವಾಯು ಸಾರಥಿ-ಅಹಾ
ಅದು ಬಿಂಬಮೂರ್ತಿ ಜೀವದಾಕಾರಾವಾಗಿದ್ದ
ಪದುಮಕೋಶದಲ್ಲಿ ಸದಮಲಾತ್ಮಕನನ್ನು ||9||

ಧರೆಯನಳೆದ ದಿವ್ಯ ಚರಣ, ಅದು
ಮೆರೆವುತಿಹುದು ಕೋಟಿ ಅರುಣನಂತೆ
ಪರಿಪೂರ್ಣ ಭರಿತವು ಕಿರಣ, ಸ್ಮರಿ-
ಪರಿಗೆ ಮಾಡುವುದು ಕರುಣ-ಆಹ
ತರಣಿಯಂಥ ನಖದಿ ಸುರನದಿಯನು ಹೆತ್ತ
ಎರಡೈದು ಬೆರಳಲ್ಲಿ ಕಿರುಗೆಜ್ಜೆ ಪೆಂಡೆಯು ||10||

ಪೆರಡು ಜಾನು ಜಂಘೆ ಘನ್ನ ಸುರು-
ಚಿರ ವಜ್ರಾಂಕುಶ ಧ್ವಜ ನಾನಾ, ದಿವ್ಯ
ವರ ರೇಖೆಯಿಂದಲೊಪ್ಪುವನ, ಜಘನ
ಪರಮ ಶೋಭಿತ ಸುಂದರನ-ಆಹ
ಉರುಟು ಕದಳಿ ಕಂಬ ಇರುವೂರು ಶೋಭಿಸೆ
ಸರಿಗಾಣೆ ಹರಿವುಟ್ಟ ವರ ಪೀತಾಂಬರವನ್ನು ||11||

ಗಜವೈರಿಯಂತಿಪ್ಪ ಮಧು ಬಲು
ವಿಜಯ ವಡ್ಯಾಣ ಅಚ್ಛೇದ್ಯ, ಭೇದ್ಯ
ನಿಜಘಂಟೆ ಘಣರೆಂಬೊ ವಾದ್ಯ, ಕು
ಬುಜೆ ಡೊಂಕ ತಿದ್ದದನಾದ್ಯ-ಆಹ
ಅಜ ಜನಿಸಿದ ನಾಭ್ಯಂಬುಜದಳ ಚತುರ್ದಶ
ತ್ರಿಜಗ ಭರಿತ ಕುಕ್ಷಿ ನಿಜಪೂರ್ಣ ಸಖನನ್ನು ||12||

ಉದರ ತ್ರಿವಳಿ ನಾನಾ ಹಾರ ದಿವ್ಯ
ಪದಕ ಪವಳದ ವಿಸ್ತಾರ ರತ್ನ
ಮುದದಿಂದ ಧರಿಸಿದ ಧೀರ ಸುಂದರ
ವಾದ ಕಂಬುಕಂಧರ-ಆಹಾ
ಪದುಮಜ ಭವರಿಂದ ತ್ರಿದಶರು ತಿಳಿಯುತ್ತ
ಸದಾಕಾಲ ಧ್ಯಾನಿಪ ಹೃದಯಾಂಬರವನ್ನು ||13||

ಸಿರಿವತ್ಸ ಕೌಸ್ತುಭಹಾರ, ಮೇಲೆ
ಸರಿಗೆ ನ್ಯಾವಳದ ವಿಸ್ತಾರ ಅಲ್ಲಿ
ಉರ ವೈಜಯಂತಿ ಮಂದಾರ, ಗುರು
ತರವಾದ ಭುಜ ಚತುರ-ಆಹ
ಮರಿಯಾನೆ ಸೊಂಡಿಲಂತಿರೆ ಬಾಹು ಕೇತಕಿ
ಬೆರಳು ನಕ್ಷತ್ರದ ಅರಸಿನಂತೆ ನಖ||14||

ಕರಚತುಷ್ಟಯದಲ್ಲಿ ಶಂಖ, ಚಕ್ರ
ವರಗದೆ ಪದುಮು ನಿಶ್ಶಂಕನಾಗಿ
ಧರಿಸಿ ಮೆರೆವೊ ಅಕಳಂಕ, ದುರು
ಳರ ದಂಡಿಸುವ ಛಲದಂಕ ಆಹ
ಬೆರಳು ಮಾಣಿಕದುಂಗುರ ಕಡಗ ಕಂಕಣ
ಬಿರುದಿನ ತೋಳ್ಬಂದಿ ವರ ಭುಜಕೀರ್ತಿಯ||15||

ಅಗರು ಚಂದನ ಗಂಧಲೇಪ, ಕಂಬು
ಸೊಗಸಾದ ಕಂಠಪ್ರತಾಪ, ಮಾವು
ಚಿಗುರಲೆ ಕೆಂದುಟಿ ಭೂಪ, ನಸು
ನಗುವ ವದನ ಸಲ್ಲಾಪ-ಆಹ
ಮಗನಾಗಿ ತಾನು ಗೋಪಿಗೆ ವದನದೊಳು
ಜಗವೆಲ್ಲ ತೋರಿದ ಅಗಣಿತ ಮಹಿಮನ್ನ ||16||

ಮುಗುಳು ಮಲ್ಲಿಗೆ ಮೊಗ್ಗೆ ದಂತ
ಜಗವ ಮೋಹಿಸುವ ಸುಶಾಂತ ಜಿಹ್ವೆ
ನಿಗಮಕೆ ವೇದ್ಯವಾದಂಥ ಬಲು
ಬಗೆಯಿಂದ ನಡೆಸುವ ಪಂಥ-ಆಹ
ಪೊಗಳಲಾರದು ವೇದ ಖಗವಾಹನನ ಮಹಾ
ಅಗಣಿತ ಮಹಿಮೆ ಸಂಪಿಗೆಯ ನಾಸಿಕನನ್ನು ||17||

ಪೊಳೆವೊ ವಿದ್ಯುತ ಕಪೋಲ, ನೀಲೋ-
ತ್ಪಲದಳ ನೇತ್ರ ವಿಶಾಲ, ದಿವ್ಯ-
ತಿಲಕವನಿಟ್ಟ ಸುಫಾಲ, ನೀಲಾ-
ಚಲಕಾಂತಿ ತನುರುಹ ಜಾಲ-ಆಹ
ಹೊಳೆವ ಕುಂಡಲ ಕರ್ಣದೊಲುಮೆಯ ಚೆಲುವಿಕೆ
ಇಳೆಯೊಳಗೆಣೆಗಾಣೆ ಇಂದಿರಾಲೋಲನ್ನ ||18||

ಕರುಣ ಶಾಂತ ಶುಭ ನೋಟ, ಕಂಗ-
ಳೆರಡ ಚೆಲುವಿಕೆ ಮಾಟಕಿನ್ನು
ಅರವಿಂದ ಸರಿಯಿಲ್ಲ ದಿಟ ಅಲ್ಲಿ
ತರಣಿ ಚಂದ್ರಮರ ಕೂಟ-ಆಹ
ಶರಣ ಜನರ ಮನೋಹರುಷ ವಾರ್ಧಿಗೆ ಸುಧಾ
ಕರ ದುಷ್ಟಜನರ ತಿಮಿರಕ್ಕೆ ಭಾಸ್ಕರನ್ನ ||19||

ಹೊಳೆವ ಹುಬ್ಬುದ್ವಯ ಸ್ಮರನ ಚಾಪ-
ತಲೆ ತಗ್ಗಿಸುವಂಥ ರಚನ ಫಾಲ-
ದಲ್ಲಿಟ್ಟು ತಿಲಕ ಸುಂದರನ ಲೋಕ-
ಕಳವಳಗೊಳಿಸುವ ಸುಗುಣ-ಆಹ
ನಲಿವ ವದನದಲ್ಲಿ ಅಳಿಗಳಂತೊಪ್ಪುವ
ಸುಳಿಗುರುಳಿನ ಮೇಲೆ ವಲಿವಾರಳೆಲೆಯನ್ನು ||20||

ರೂಪ ಶೃಂಗಾರ ವಿಲಾಸ ಉಡು-
ಭೂಪ ನಾಚುವ ಮುಖಹಾಸ ವಿಶ್ವ
ರೂಪ ಧೃತ ಸ್ವಪ್ರಕಾಶ ಸರ್ವ
ವ್ಯಾಪಕಾಖಿಳ ಜಗದೀಶ-ಆಹ
ತಾಪಸರಿಗೆ ಕರುಣಾಪಯೋನಿಧಿ-ಅಣು
ರೂಪಿನೋಳ್ ಪರಮಾಣು ರೂಪನಾಗಿಪ್ಪನ್ನ||21||

ಕೋಟಿಮಾರ್ತಾಂಡ ಸಂಕಾಶ ಕಿ
ರೀಟಕ್ಕೆ ಅಸಮ ಪ್ರಕಾಶ ಎಲ್ಲು
ಸಾಟಿಗಾಣೆನು ಲವಲೇಶ ಕಪಟ-
ನಾಟಕ ಶ್ರೀ ಲಕುಮೀಶ-ಆಹ
ನೇಟಾಗಿ ನಖ ಲಲಾಟ ಪರಿಯಂತ
ನೋಟದಿಂದಲೆ ಈಶ ಕೋಟಿ ಸಹಿತನಾಗಿ ||22||

ಕಾಮಾದಿಗಳನೆಲ್ಲ ತರಿದು ಮುಕು-
ತೀ ಮಾರ್ಗವನ್ನೆ ನೀನರಿದು ಅತಿ-
ಪ್ರೇಮದಿ ಗುರುಗಳ ನೆನೆದು ಹೇಮ
ಭೂಮಿ ಕಾಮಿನಿಯರ ಜರಿದು-ಆಹ
ಸಾಮಜ ವರದ ಶ್ರೀ ವಿಜಯವಿಠ್ಠಲನಂಘ್ರಿ
ತಾಮರಸ ಯುಗ್ಮ ನೇಮದಿಂದಲಿ ನಿತ್ಯ ||23||