ನಂಬದಿರು ಈ ದೇಹ

Category: ಶ್ರೀಕೃಷ್ಣ

Author: ವಿಜಯದಾಸ

ನಂಬದಿರು ಈ ದೇಹ ನರಲೋಕವೆಂಬುದು ಸುಖವೆಂದು
ನಂಬದಿರು ಮಾಯಾ ಪ್ರಪಂಚವನು ಅನುಗಾಲಾ
ನಂಬು ನಮ್ಮಂಬುಜಾಂಬಕನ ಪಾದಾಂಬುಜವ
ನಂಬಿದರೆ ಮುಕ್ತಿಯಲಿ ಇಂಬುಂಟು ಮರುಳೆ

ತಂದೆ ತಾಯಿ ತಮ್ಮ ಸುಖಕೆ ಏಕಾಂತದಲಿ
ಒಂದು ದಿನಲಿರಲಾಗಲವರರೇತಸು
ಬಿಂದುವಿನಲಿ ಉತ್ಪತ್ಯವಾಗಿ ಬೆರೆದಾಗ ದು
ರ್ಗಂಧದೊಳು ಬಂದು ನಿಂದೂ
ಬಂಧನದೊಳಗೆ ಸಿಲುಕಿ ಒಂದೆಂಟು ತಿಂಗಳು
ಪೊಂದಿ ಯಾತನೆಬಟ್ಟು ಮಲಮೂತ್ರ ಹೇಸಿಕೆಯಿಂದ ಕುದಿದು
ಬೆಂದೂ ಗರ್ಭದ ಮಧ್ಯದಲಿ ನೊಂದು
ಬಿಂದು ಕೆಳಗೆ ಹೊರಳಿದಿರು ಮರುಳೆ ||1||

ತಾಮಸವ ಕವಿದು ಕಾವಳಗೊಂಡ ಕತ್ತಲೆಯ
ಸೀಮೆಯೊಳಗೆ ಸಿಲ್ಕಿ ಬಾಲತ್ವತನದಲ್ಲಿ
ನೀ ಮಂದನಾಗಿ ಮರುಳಾಟಕ್ಕೆ ಮನವು ಉಬ್ಬಿ
ಧಾಮಕ್ಕೆ ಪೋಪುತಿರಲೂ ಆಮೇಲೆ
ಮುಂಜಿಯನು ಕಟ್ಟಿ ಬಂಧುಬಳಗ
ಪ್ರೇಮದಿಂದಲಿ ನೆರೆದು ಮೋಹದಲಿ ಒಬ್ಬ
ಕೋಮಲೆಯ ಜತೆಮಾಡಲು ನೋಡಿ ಹಿಗ್ಗುತ್ತಾ
ಛೀಮಾರಿಯಾಗಿ ತಿರುಗಲಿ ಬೇಡ ಮರುಳೆ ||2||

ಮದ ಮತ್ಸರ ಲೋಭ ಮೋಹ ಕಾಮಾದಿಯಲಿ
ಮದನ ಬಲಿಗೆ ಬಿದ್ದು ಅಹಂಮತಿ ಪಂಕದಾ
ಹುದಲಿನೊಳಗೆ ಮುಣುಗಿ ಮುಂಗಾಣದಲೆ ತನು ರೂಹ
ಮೊದಲಾಗಿ ವಿಷವ ತುಂಬಿ ಇದರಲಿ
ಕಾಲವನು ಕಳೆದು ಮಕ್ಕಳ ಪಡೆದು
ತುದಿಮೊದಲು ಧರ್ಮವನು ಮರೆದು ಮಮತೆಯಲ್ಲಿ
ಸದರೆಂದಿಲ್ಲದಾ ದುಷ್ಕರ್ಮಗಳು ಮಾಡಿ
ಮುದದಿಂದ ನರಕದೊಳು ಬೀಳುವಾ ಹುರುಳೆ ||3||

ಇದ್ದಾಗ ನೆಂಟರಿಷ್ಟರು ಬಂದು ಚೆನ್ನಾಗಿ
ಹೊದ್ದಿಕೊಂಡು ನಿನ್ನ ಕೊಂಡಾಡಿ ನೂರಾರು
ಸುದ್ದಿಯನು ಪೇಳಿ ನಡುಮನೆಯೊಳಗೆ ಇದ್ದು ನಿನ್ನಯ ಬದುಕು
ಉದ್ದಿನ ಕಾಳಿನಷ್ಟು ಉಳಿಯಲೀಸದೆ ನಿತ್ಯಾ
ಬದ್ಧವಿಲ್ಲದಲೆ ಕರಗಾತಿಂದು ಬಡತನಾ
ಸಿದ್ಧನಾಗಲು ತಿಂದವರು ಹರದೋಡಿ
ಎದ್ದು ಪೋಗಲು ಕೆಟ್ಟಬಾಯಿದೆರವಾ ಮರುಳೆ ||4||

ಬಿಡು ಬಿಡು ಅಕಟ ಸಂಸಾರ ಸಾಗರದ
ಮಡುವಿನೊಳಗೆ ಬಿದ್ದು ಕಾಲ್ಗೆಡೆದು ಪೋಗದೆ
ಹಿಡಿ ಹಿಡಿ ಪರಮ ಭಾಗವತರ ಸಂಗತಿಯ
ಬಿಡದೆ ಪರಿಶುದ್ಧನಾಗಿ ಪಡೆದು
ಸರ್ವಜ್ಞತೀರ್ಥರ ಮತದ ಕರುಣವನು
ಪಡೆಯಲು ಅಧಿಕಾರನಾಗಿ ಸಿರಿದೇವಿಯ
ವೊಡಿಯ ವಿಜಯವಿಠ್ಠಲನಂಘ್ರಿ ನೆರೆ ನಂಬಿ
ತಡಿಯದಲೆ ಸದ್ಗತಿಗೆ ಸೇರುವದು ಮರುಳೆ||5||