ನಾನಾರ ದೂಷಿಸಲಿ
Category: ವೈರಾಗ್ಯ
Author: ವಚನವೇದ
ನಾನಾರ ದೂಷಿಸಲಿ, ನಾನೆ ತೋಡಿದ ಕೂಪ-
ದಾಳದಲಿ ನಾನಾಗಿ ಮುಳುಗುತಿಹೆನು |
ಅರಿವರ್ಗಗಳ ಹಿಡಿದು ನಿನ್ನ ಸುಕ್ಷೇತ್ರದಲಿ
ನಾನೆ ಈ ಬಾವಿಯನು ತೋಡಿರುವೆನು |
ಕಾಲರೂಪದ ಕರಿಯ ನೀರೆದ್ದು ನುಗ್ಗುತಿದೆ
ಓ ತಾಯಿ ನಾ ನಿನಗೆ ಶರಣೆನುವೆನು |
ನಾನೆಯೇ ನನಗೆ ಹಗೆ , ಹೇಗೆ ತಡೆಯಲಿ ಹೇಳು
ಮೇಲೆದ್ದು ನುಗ್ಗುವೀ ಕಾಳಜಲವ ?
ಎನ್ನ ಎದೆಯುದ್ದಕೂ ತುಂಬಿಕೊಂಡಿತು ನೀರು,
ನೀನಲ್ಲದಿನ್ನಾರು ರಕ್ಷಿಸುವರು ?
ನೀನೊಬ್ಬಳೇ ರಕ್ಷೆ, ನಿನ್ನೊಳಗೆ ಈ ಭಿಕ್ಷೆ,
ದಾಟಿಸಾಚೆಯ ದಡಕೆ ಈ ಶಿಶುವನು |