ನಮೋ ನಮೋ ಜಯ ತುಂಗಭದ್ರೆ

Category: ಶ್ರೀದೇವಿ

Author: ವಿಜಯದಾಸ

ನಮೋ ನಮೋ ಜಯ ತುಂಗಭದ್ರೆ
ನಮಿತರನು ಪಾಲಿಸುವ ಸದ್ಗುಣ ಸಮುದ್ರೆ

ವೈರಾಚ ನಗರಿಯಲಿ ವಿಧಾರುಣಿಯ ರೋಚಕನು
ಮೀರಿ ದೇವಾದಿಗಳಿಗಂಜದಿರಲು
ಘೋರ ರೂಪವ ತಾಳಿ ಅವನ ಕೊಲ್ಲಲು ಹರಿಯ
ಮೋರೆ ಕರಿಬೆವರಿಡಲು ಅತಿ ಹರುಷದಿಂದ ||1||

ರೂಢಿಯೊಳಗೆಲ್ಲ ಸಮಸ್ತ ನದಿ ಉದಕಗಳು
ನೋಡಿದರು ರುಚಿಕರವಿಲ್ಲವೆಂದೂ
ದಾಡಿಯಲಿ ಧರಿಸಿದನು ಸುರರು ಕೊಂಡಾಡುತಿರೆ
ಈಡ್ಯಾರು ನಿನ್ನ ಮಹಿಮೆಗೆ ವರಹತನಯೇ ||2||

ಸಲಿಲವೇ ಹರಿಯಾದ ಶಿವ ನಿನಗೆ ಶಿಲೆಯಾದ
ಬಲು ಮುನಿಗಳು ಮಳಲವಳಗಾದರೂ
ಜಲಜ ಸಂಭವನು ತೃಣನಾದ ಬಳಿಕ ವಿಷ್ಣು
ಕೆಲವುಕಾಲ ನಿನ್ನೊಳಗೆ ನಿಲಿಸಿದನು ತುಂಗೆ ಗಂಗೆ||3||

ವೇದಾದ್ರಿಯಲಿ ಜನಿಸಿ ನರಸಿಂಹ ಕ್ಷೇತ್ರದಲಿ
ಭೇದವಿಲ್ಲದಲೆ ಸಂಗಮವು ಎನಿಸೀ
ಆದರದಿಂದ ಹರಹರ ಪೊಂಪ ಬಲಗೊಂಡು
ಮೊದಲು ಶ್ರೀ ಕೃಷ್ಣ ಬೆರದೆ ಕೂಡಲಿಯೊಳು ||4||

ತುಂಗೆ ತುಂಗೆ ಎಂದು ಸ್ಮರಿಸುವಾ ಜನರಿಗು
ತ್ತಂಗ ಗತಿಯಾಗುವುದು ಪಾಪವಳಿದು
ಮಂಗಳ ಮೂರುತಿ ವಿಜಯವಿಠ್ಠಲನ ಚರಣಂಗಳಲಿ
ಇದ್ದವರ ಸತತ ಪೊರೆವುದು ದೇವಿ ||5||