ನಾ ನಿನ್ನ ಧ್ಯಾನದೊಳಿರಲು

Category: ಶ್ರೀಕೃಷ್ಣ

Author: ಪುರಂದರದಾಸ

ನಾ ನಿನ್ನ ಧ್ಯಾನದೊಳಿರಲು | ಮಿಕ್ಕ
ಹೀನ ಮಾನವರೇನು ಮಾಡಬಲ್ಲರೋ ರಂಗ ||

ಮತ್ಸರಿಸುವರೆಲ್ಲ ಕೂಡಿ ಮಾಡುವುದೇನು
ಅಚ್ಯುತ ನಿನದೊಂದು ದಯೆಯಿರಲು |
ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ
ಕಿಚ್ಚಿಗೆ ಇರುವೆ ಮುತ್ತುವುದೆ ಪೇಳೆಲೊ ರಂಗ ||

ಕನ್ನಡಿಯೊಳಗಿನ ಗಂಟು ಕಂಡು ಕಳ್ಳ
ಕನ್ನವಿಕ್ಕಲವನ ವಶವಹುದೆ |
ನಿನ್ನ ನಂಬಲು ಮುದ್ದು ಪುರಂದರವಿಟ್ಠಲ
ಚಿನ್ನಕ್ಕೆ ಪುಟವನಿಟ್ಟಂತೆ ಅಹುದು ರಂಗ ||