ನಿನಗಿಂತ ಅಧಿಕರು ನಿನ್ನಯ ಭಕುತರು

Category: ಶ್ರೀಕೃಷ್ಣ

Author: ವಿಜಯದಾಸ

ನಿನಗಿಂತ ಅಧಿಕರು ನಿನ್ನಯ ಭಕುತರು
ಇದಕೆ ಅನುಮಾನಗೊಳಬೇಡ ಅಂಬುಧಿಶಯನ

ಪದಿನಾಲ್ಕು ಲೋಕಗಳು ಪೊತ್ತೆನೆಂದೆನಬೇಡ
ಅದುಸಹಿತ ನಿನ್ನನು ಹೃದಯದೊಳಗೆ
ಹುದುಗಿಕೊಂಡಿಪ್ಪರೋ ಪದುಮನಾಭನೆ ಕೇಳೊ
ಇದರಿಂದ ಸರಿಮಿಗಿಲು ಆರೊ ಜನದೊಳಗೆ ||1||

ವನಜಾಂಡಗಳೆಲ್ಲ ಪೊತ್ತೆನೆಂದೆನಬೇಡ
ಕೊನೆಯ ನಾಲಿಗೆಯಲ್ಲಿ ನಿನ್ನ ನಿಲಿಸಿ
ಅಣುಮಾತ್ರ ಭಾರ ಇಲ್ಲದಂತಿಪ್ಪರೊ
ಘಣಿಶಯನ ಅಧಿಕಸಮರಾರೊ ಜಗದೊಳಗೆ ||2||

ಅಣುಮಹತ್ತು ಆದೆನೆಂದೆನೆಬೇಡವೊ
ಗಣನೆ ಇಲ್ಲದೆ ನಿನ್ನ ಕರದಿ ಮುಚ್ಚಿ
ಘಣಿ ಆಹಾರಗಾಮಿ ನಾ ವಿಜಯವಿಠ್ಠಲ ನಿನಗೆ
ಮಣಿದು ಲೆಕ್ಕಿಸರೋ ನಿನ್ನನು ಮೆಚ್ಚಿದಾಳುಗಳು||3||