ನಾನಿನ್ನೊಳನ್ಯ ಬೇಡುವುದಿಲ್ಲ

Category: ಶ್ರೀಕೃಷ್ಣ

Author: ಪುರಂದರದಾಸ

ನಾನಿನ್ನೊಳನ್ಯ ಬೇಡುವುದಿಲ್ಲ|
ಹೃದಯಕಮಲದೊಳು ನಿಂದಿರು ಹರಿಯೆ ||

ಶಿರ ನಿನ್ನ ಚರಣಕೆ ಎರಗಲಿ | ಎನ್ನ
ಚಕ್ಷು ಸದಾ ನಿನ್ನ ನೋಡಲಿ ಹರಿಯೆ |
ಕರ್ಣ ಗೀತಂಗಳ ಕೇಳಲಿ | ನಿನ್ನ
ನಿರ್ಮಾಲ್ಯವ ನಾಸಘ್ರಾಣಿಸಲಿ ||

ನಾಲಿಗೆ ನಿನ್ನನು ಕೊಂಡಾಡಲಿ |
ಕರಗಳೆರಡು ನಿನ್ನನರ್ಚಿಸಲಿ |
ಚರಣ ತೀರ್ಥಯಾತ್ರೆ ಮಾಡಲಿ | ಎನ್ನ
ಮನ ಅನುದಿನ ನಿನ್ನ ಸ್ಮರಿಸಲಿ ಹರಿಯೆ ||

ಬುದ್ದಿಯು ನಿನ್ನೊಳು ಬೆರೆಯಲಿ ಹರಿಯೆ |
ಚಿತ್ತ ನಿನ್ನೊಳು ಸ್ಥಿರವಾಗಲಿ |
ಭಕ್ತಜನರಸಂಗವಾಗಲಿ | ಪುರಂದರ-
ವಿಟ್ಠಲನೆ ಇಷ್ಟೇ ದಯಮಾಡೊ ||