ನಿನ್ನನಗಲಿ ಪೋಗಲಾರೆವೋ
Category: ಶ್ರೀಕೃಷ್ಣ
Author: ವಿಜಯದಾಸ
ನಿನ್ನನಗಲಿ ಪೋಗಲಾರೆವೋ ನೀರಜಾಕ್ಷ
ನಿನ್ನ ಸೇರಿ ಸುಖಿಸ ಬಂದೆವೊ
ಮನ್ನಿಸದೆ ಮಮತೆಯಿಂದ ಭಿನ್ನ ನುಡಿಗಳಾಡಿ ನಮಗೆ
ಹಣ್ಣು ತೋರಿ ಕಾಳಕೂಟವನ್ನು ಕೊಡುವರೇನೊ ಕೃಷ್ಣ
ಐದುವದಕೆ ಶಕ್ಯವಲ್ಲದ ಅಪ್ರಮೇಯ
ಆದಿಪುರುಷ ಅಮರಸನ್ನುತ
ಶ್ರೀದ ನಮ್ಮ ಕೈಯ ಬಿಡದೆ ಆದರಿಸಬೇಕು ಪರವ-
ರಾದರೇನು ನಿನ್ನ ಶರಣರಾದ ಮೇಲೆ ಬಿಡುವುದುಂಟೆ||1||
ಬಂಧುವರ್ಗವನ್ನು ಬಿಡುವುದು ಸ್ತ್ರೀಯರಿಗೆ
ನಿಂದ್ಯವೆಂದು ಶಾಸ್ತ್ರ ಪೇಳ್ವುದು
ಎಂದೆಗೆಂದಿಗೆಮಗೆ ನೀನೆ ಬಂಧುವೆಂದು ಬಂದಿಹೆವೊ
ಸಿಂಧುಶಯನ ಎಮ್ಮನ್ಯಾಕೆ ಇಂದು ಹೋಗಿರೆಂಬೆ ನೀನು||2||
ಶಮದಮಾದಿ ಗುಣಗಳಿಂದಲಿ ಸಜ್ಜನರು
ಕ್ರಮದಿ ನಿನ್ನ ಮೂರ್ತಿ ಮನದಲಿ
ಮಮತೆಯಿಂದ ಪೂಜಿಸುತ್ತ ಗಮಿಸುವರೊ ನಿನ್ನ ಪುರಕೆ
ನಮಗೆ ಮಾತ್ರ ಪತಿಸುತಾದ್ಯರಮಿತ ಸುಖವ ಕೊಡುವರೇನೊ ||3||
ಮೋಕ್ಷ ಇಚ್ಛೆಯಿಂದ ನಿನ್ನನು ಭಜಿಪ ಜನರಾ
ಪಕ್ಷ ವಹಿಸಿದಂತೆ ನಮ್ಮನು
ರಕ್ಷಿಸದೆ ಬಿಡುವರೇ ಕಟಾಕ್ಷದಿಂದ ಈಕ್ಷಿಸದೆ
ಲಕ್ಷ್ಮೀದೇವಿ ನಿಮಗೆ ಬಹಳಾಪೇಕ್ಷೆಯಿಂದ ಮೋಹಿಸಿದಳೆ ||4||
ಅನಘ ನಿನ್ನ ನೋಡಿ ಮೋಹಿಸಿ ಅಂತರಾತ್ಮ
ತನುವು ಮನವು ನಿನಗೆ ಅರ್ಪಿಸಿ
ಜನನ ಮರಣದಿಂದ ಜನರು ದಣಿವರೇನೂ ಕಾಂತ ನಮ್ಮ
ಮನಸಿನಂತೆ ಒಲಿದು ಸಲಹೊ ವನಜನಾಭ ವಿಜಯವಿಠ್ಠಲ ||5||