ನೆನೆದು ನೆನೆಸಿ ನಿಮ್ಮ
Category: ಶ್ರೀಕೃಷ್ಣ
Author: ವಿಜಯದಾಸ
ನೆನೆದು ನೆನೆಸಿ ನಿಮ್ಮ
ತನುಮನದಲ್ಲಿ ಯೋಚನೆ ಮಾಡೀ
ಎಣಿಸಿ ಗುಣಿಸಿ ಮನಸಿಜನ್ನ ಜನಕನ ಲೀಲೆ
ನರನಾರಾಯಣನೀತ ಕೃಷ್ಣ
ಹರಿ ಹೃದ್ಭಾನು ಕಪಿಲನೀತ
ಹರಿನಾರಾಯಣೇನೀತ ಯೋಗೀ
ಶ್ವರ ತಾಪಸ ವೈಕುಂಠನೀತ
ಹರನಸಖ ಸ್ವಧಾಮನೀತ
ತುರಗವದನನೀತ ದಯಾ
ಕರುಣಿ ಸಾರ್ವಭೌಮನನೀತಾ ||1||
ಅಜಿತಯಜ್ಞನಾಮನೀತ
ಅಜಗೆ ಪೇಳಿದ ಹಂಸನೀತ
ಸುಜನಪಾಲ ವ್ಯಾಸ ವೀ
ರಜ ಮಹಿದಾಸ ದತ್ತನೀತ
ನಿಜ ಮಹಿಮ ಧನ್ವಂತ್ರಿ ಈತ
ತ್ರಿಜಗವಳೆದುಪೇಂದ್ರನೀತ
ಭಜಕರೊಡಿಯ ವಿಷಕ್ಸೇನ ಭುಜಗಶಾಯಿವಿಭುವೆ ಈತ ||2||
ಚಲುವ ಧರ್ಮಶೇತು ಈತ
ಬಲುವುಳ್ಳ ಶಿಂಶುಮಾರನೀತ
ಪೊಳೆವ ಮತ್ಸ್ಯ ಕೂರ್ಮವರಹ
ಲಲಿತನರಸಿಂಹನೀತ
ಬಲಿಗೊಲಿದ ವಾಮನ್ನನೀತ
ಕುಲವೈರಿ ರಘರಾಮನೀತ
ಕಳುವು ಮಾಡಿದನೀತ ಬತ್ತಲೆ
ಕಲಕಿ ರೂಪನಾದನೀತಾ ||3||
ಪುರುಷನಾಮಕನೀತ-ವಿ
ಸ್ತರ ವಾಸುದೇವ ಜಯಪತಿ ಸುಂ
ದರ ಪ್ರದ್ಯುಮ್ನ ಈತ ನಿರಂತರ ಅನಿರುದ್ಧನೀತ ಚ
ತುರ ವಿಂಶತಿ ಮೂರುತಿಯೇ ಈತ
ಮೆರೆವ ಅಜಾದಿ ನಾಮಕನೀತ
ವರ ಪಂಚಮೂರುತಿಯೇ ಈತಾ
ಎರಡೈದು ಮೇಲೊಂದನೀತ ||4||
ಪರಿಪರಿ ರೂಪ ಉಳ್ಳನೀತ
ಹೊರಗೆ ಒಳಗೆ ವ್ಯಾಪ್ತನಾಗಿ
ಸರಿಸರಿ ಬಂದ ತೆರದಿ ಜಗವ
ಸರಸದಲಿ ಆಡಿಪನೀತ
ಸ್ಮರಣೆ ಮಾಡಲು ಸಕಲ ಇಷ್ಟವ
ಕರೆದು ಕೊಡವನೀತ
ಶಿರಿಯರಸ ವಿಜಯವಿಠ್ಠಲನೀತ
ಮರಣ ಜನನರಹಿತ ನೀತ ||5||