ನೋಡಿದೆ ಗುರುಗಳ ನೋಡಿದೆ
Category: ಶ್ರೀಗುರು ರಾಘವೇಂದ್ರ
Author: ವಿಜಯದಾಸ
ನೋಡಿದೆ ಗುರುಗಳ ನೋಡಿದೆ
ನೋಡಿದೆನು ಗುರುರಾಘವೇಂದ್ರರ
ಮಾಡಿದೆನು ಭಕುತಿಯಲಿ ವಂದನೆ
ಬೇಡಿದೆನು ಕೊಂಡಾಡಿ ವರಗಳ
ಈಡು ಇಲ್ಲದೆ ಕೊಡುವ ಗುರುಗಳ
ಮೊದಲು ಗಾಂಗೇಯ ಶಯ್ಯಜನು ಈ
ನದಿಯ ತೀರದಲ್ಲಿ ಯಾಗವ
ಮುದದಿ ರಚಿಸಿ ಪೂರೈಸಿ ಪೋಗಿರ
ಲದನು ತಮ್ಮೊಳು ತಿಳಿದು ತವಕದಿ
ಹೃದಯ ನಿರ್ಮಲರಾಗಿ ರಾಗದಿ
ಬುಧಜನರ ಸಮ್ಮೆಳದಲಿ ಸಿರಿ
ವದನನಂಘ್ರಿಯ ತಿಳಿದು ನೆನೆವರ
ಉದಿತ ಭಾಸ್ಕರನಂತೆ ಪೊಳೆವರ ||1||
ಆಲವಬೋಧ ಮಿಕ್ಕಾದ ಮಹಮುನಿ
ಗಳು ಸಅಂಶರು ಒಂದು ರೂಪದಿ
ನೆಲೆಯಾಗಿ ನಿತ್ಯದಲಿ ಇಪ್ಪರು
ಒಲಿಸಿಕೊಳುತಲಿ ಹರಿಯ ಗುಣಗಳ
ತಿಳಿದು ತಿಳಿಸುತ ತಮ್ಮ ತಮಗಿಂ
ರಧಿಕರಿಂದುಪದೇಶ ಮಾರ್ಗದಿ
ಕಲಿಯುಗದೊಳು ಕೇವಲ ಕ
ತ್ತಲೆಯ ಹರಿಸುವ ಸೊಬಗ ಸಂತತ ||2||
ರಾಮ ನರಹರಿ ಕೃಷ್ಣ ಕೃಷ್ಣರ
ನೇಮದಿಂದೀ ಮೂರ್ತಿಗಳ ಪದ-
ತಾಮರಸ ಭಜನೆಯನು ಮಾಳ್ಪರು
ಕೋಮಲಾಂಗರು ಕಠಿನಪರವಾದಿ
ಸ್ತೋಮಗಳ ಮಹಮಸ್ತಕಾದ್ರಿಗೆ
ಭೂಮಿಯೊಳು ಪವಿಯೆನಿಸಿದ ಯತಿ
ಯಾಮ ಯಾಮಕೆ ಎಲ್ಲರಿಗೆ ಶುಭ
ಕಮಿತಾರ್ಥವ ಕರೆವ ಗುರುಗಳ ||3||
ನೂರು ಪರ್ವತ ವರುಷ ಬಿಡದಲೆ
ಚಾರು ವೃಂದಾವನದಲಿ ವಿ
ಸ್ತಾರ ಆರಾಧನೆಯು ತೊಲಗದೆ
ವಾರವಾರಕೆ ಆಗುತ್ತಿಪ್ಪುದು
ಸಾರೆ ಕಾರುಣ್ಯದಲಿ ಲಕುಮೀ
ನಾರಾಯಣ ತಾ ಚಕ್ರರೂಪದಿ
ಸಾರಿದವರಘವ ಕಳೆದು ಇವರಿಗೆ
ಕೀರುತಿಯ ತಂದಿಪ್ಪುದನುದಿನ||4||
ಮಿತವು ಎನದಿರಿ ಇಲ್ಲಿ ದಿನ ದಿನ-
ಕತಿಶಯದೆ ಆಗುವುದು ಭೂಸುರ
ತತಿಗೆ ಭೋಜನ ಕಥಾಶ್ರವಣ ಭಾ-
ರತ ಪುರಾಣಗಳಿಂದಲೊಪ್ಪುತ
ಕ್ಷಿತಿಯೊಳಗೆ ಮಂಚಾಲೆ ಗ್ರಾಮಕೆ
ವ್ರತಿಯ ಇಲ್ಲವೆಂದೆನಿಸಿಕೊಂಬುದು
ಪತಿತಪಾವನ ವಿಜಯವಿಠಲನ
ತುತಿಸಿಕೊಳ್ಳುತ ಮೆರೆವ ಗುರುಗಳ ||5||