ನೋಡಿದೆನೊ ಮನದಣಿಯ ನಳಿನಭವಾದ್ಯರ

Category: ಶ್ರೀಕೃಷ್ಣ

Author: ವಿಜಯದಾಸ

ನೋಡಿದೆನೊ ಮನದಣಿಯ ನಳಿನಭವಾದ್ಯರ
ಕ್ರೀಡಾಮೃಗವನೆ ಮಾಡಿ
ಆಡಿಸುವ ವಿಚಿತ್ರ ಮಹಿಮ ಗೋಪಾಲಗ
ಈಡುಗಾಣೆನೊ ಎಲ್ಲೆಲ್ಲಿ ಆವಲ್ಲಿ

ಕಾಲಲಂದಿಗೆ ಗೆಜ್ಜೆ ಸರಪಳಿ ಉಡುದಾರ
ಮೇಲು ಕಿರಿಗೆಜ್ಜೆ ಘಂಟೆ
ತೋಳು ರಕ್ಷಾಮಣಿ ನಾಗ ಮುರಿಗೆ ಬಂದಿ
ಸಾಲು ತಾಯಿತ ಕಟ್ಟಿರೆ
ನೀಲ ಮಾಣಿಕ ವಜ್ರ ಉಂಗುರದ ಬೆರಳು ಸು
ಫಾಲದಲಿಯಿಟ್ಟ ತಿಲಕಾ
ಲಾಲಿಸುವ ಬಾಲಕರೂಪದಿಂದಲಿ ಪ್ರಾತಃ
ಕಾಲದಿ ಮೆರೆವ ಕೃಷ್ಣನ ಇಂದು ||1||

ಮುಂಗೈ ಮುರಾರಿ ಪವಳದ ಬುಲಿಗೆಜ್ಜೆ
ಬಂಗಾರ ಕೊರಳಲ್ಲಿ ಹಾ
ರಂಗಳನು ಶೋಭಿಸುವ ಮಾಗಾಯಿ ಕರ್ಣದಲಿ
ಮಂಗಳ ಉರ ಕೌಸ್ತಭ
ಕಂಗೊಳಿಪ ಎಣೆನೂಲು ಹುಲಿಯುಗುರು ತಾಳಿಸರ
ಹಿಂಗದಲೆ ಪಚ್ಚೆ ಪದಕಾ
ಶೃಂಗಾರದರಳೆಲೆ ಶಿರದಿ ಜಾವಳ ಜಡೆ
ತುಂಗಭೂಷಣ ಶಾಂತನ ಇಂದು ||2||

ಕಣ್ಣಿಗ್ಹಚ್ಚಿದ ಕಪ್ಪು ಮಕರ ಕಡಗೋಲ
ನೇಣನ್ನೆ ಕರದಲಿ ಪಿಡಿದು
ಕೆನ್ನೆ ವದನ ಕಂಠ ಉದರ ಉರ ಪಾಣಿಗಳು
ಬೆಣ್ಣೆ ಮೊಸರಿಲಿ ತೋದಿರೆ
ಚನ್ನನಾಸಾ ಮಣಿತೂಗೆ ಅದರ ಭಾಗ್ಯ
ಬಣ್ಣಿಪಲರಿದು ತಿಳಿದು
ಚಿನ್ಮಯ ವಿಜಯವಿಠ್ಠಲ ವಿಶ್ವರೂಪ ಪಾ
ವನ್ನ ಉಡುಪಿಯ ಕೃಷ್ಣನ ಇಂದು ||3||