ಪಂಪಾಪುರಾಧಿಪ ಶ್ರೀ ವಿರೂಪಾಕ್ಷ
Category: ಶ್ರೀಕೃಷ್ಣ
Author: ವಿಜಯದಾಸ
ಪಂಪಾಪುರಾಧಿಪ ಶ್ರೀ ವಿರೂಪಾಕ್ಷ ನೀ ಪಾಲಿಪುದೆಮ್ಮನು
ಕಾಪಾಡುವುದು ಶ್ವೇತ ದ್ವೀಪಾವಾಸನ ತೋರಿ
ಸರ್ಪಭೂಷಣ ದೇವ ತ್ರಿಪುರಸಂಹಾರ
ಭಾಪುರೆ ಸುರಕುಲ ದೀಪ ಸದಾಶಿವ
ಶ್ರೀಪತಿ ಪಾದ ಸಮೀಪದ ಸೇವಕ
ಹರಿಪಾದೋದಕ ಶಿರದಲಿ ಧರಿಸಿದ
ಹರಿಕಥಾಮೃತ ಮಳೆಗರೆವೆ ನೀ
ಕರುಣಿ ಸಂಕರುಷಣನ ಚರಣಾಬ್ಜ ಧೂಳಿ ಶ-
ರೀರ ಲೇಪನದಿಂದ ವರ ತೇಜಯುತನೆ
ಮುರಹರಗೆರಗದ ನರನಿಗೆ ನರಕವು
ಸ್ಥಿರವೆಂದು ಸುರವರ ಭೇರಿ ಭೋರಿಡುತಿರೆ
ನಿರುತ ಅವನ ಪದ ಮೆರೆಯದೆ ಮನಗೊಂಡೆ
ಶರಣು ಅಮರನುತ ಗುರು ಶಿರೋಮಣಿಯೆ||1||
ದೇಶಕ್ಕೆ ದಕ್ಷಿಣ ಕಾಳಿಯೆನಿಸುವ ವಿ-
ಶೇಷ ಸ್ಥಳದೊಳು ವಾಸವಾಗಿ ಅ-
ಶೇಷ ಜನರನ್ನು ಲೇಸಾಗಿ ಸಲಹುವಿ
ವಾಸವಾದಿ ಅನಿಮೇಷ ವಂದಿತನೆ
ದೋಷನಾಶನ ಸಂತೋಷದಿ ಗಿರಿಜೆಗೆ
ಶ್ರೀಶನ ಮಂತ್ರೋಪದೇಶವ ಮಾಡಿದೆ
ದಾಶರಥಿಯ ನಿಜದಾಸರೆನಿಸುವರ
ಪೋಷಿಪೆ ಶಿವ ಪರಮೇಶ ಕೃಪಾಳೊ ||2||
ಕಂದುಗೊರಳ ಜೀಯ ಸಿಂಧೂರ ಮೊಗನಯ್ಯ
ಕಂದರ್ಪಹರ ಭಕ್ತಬಾಂಧವ ಕಾಯೊ
ಇಂದಿರೆರಮಣ ಗೋವಿಂದನ ಪಾದಾರ-
ವಿಂದ ಭೃಂಗನೆ ಭವದಿಂದ ಕಡೆಗೆ ಮಾಡೊ
ನಂದಿವಾಹನ ಎನ್ನ ಹಿಂದಣ ಕಲುಷಿತ
ವೃಂದಗಳೋಡಿಸುವ ಇಂದುಧರ ಅರ-
ವಿಂದನಯನ ಸಿರಿ ವಿಜಯವಿಠ್ಠಲನಕುಂದದೆ
ಭಜಿಪ ಆನಂದವ ಕರುಣಿಸು ||3||