ನೀನಲ್ಲದಿನ್ನಾರು
Category: ಶ್ರೀರಾಮಕೃಷ್ಣ
Author: ಸ್ವಾಮಿ ತದ್ರೂಪಾನಂದ
ನೀನಲ್ಲದಿನ್ನಾರು ಚಿರಬಂಧು ಎನಗೆ
ನಿನ್ನನ್ನೆ ಕರೆಯುತಿಹೆ ಹೃದಯದೇಗುಲಕೆ ||
ಕಾತರದ ಅಳಲಿನಲಿ ಪರಿಪೂತ ಹೃದಯವದು
ಕ್ಷೇತ್ರವೆನೆ ಆಗಿಹುದು ದಕ್ಷಿಣೇಶ್ವರವು |
ಜನ್ಮಜನ್ಮಾಂತರದ ಸಂಸ್ಕಾರತರುರಾಜಿ
ಪಂಚವಟಿಯಂದದಲಿ ಮಿಗೆ ಒಪ್ಪುತಿಹುದು ||
ಹಗಲಿರುಳು ಎನ್ನೆದೆಯ ಹಂಬಲಿನ ಹೊನಲದುವೆ
ಜಗವ ಪಾವನಗೈವ ಗಂಗೆಯಾಗಿಹುದು |
ಜೀವಿಗಳ ಎದೆಯಲ್ಲಿ ಅನವರತ ನೆಲೆಸಿರುವ
ದೇವತೆಯೆ ಇಲ್ಲೀಗ ಮಾತೆ ಭವತಾರಿಣೀ ||
ಹೇ ದಿವ್ಯ ಅರ್ಚಕನೆ ಪಂಚವಟಿಪ್ರಿಯನೆ
ಭವತಾರಿಣೀತನಯ ಸುರನದಿಯ ಭಕ್ತ |
ಬಂದಿಲ್ಲಿ ಎಚ್ಚರಿಸು ಪ್ರೇಮಮಯಿ ಜನನಿಯನು
ಬಂಧನವು ಹರಿಯುವುದು ಮಾತೆಯೊಲುಮೆಯಲಿ ||