ಪಾಲಿಸೆ ಪದುಮಾಲಯೆ, ನೀನೇ ಗತಿ
Category: ಶ್ರೀಮಹಾಲಕ್ಷ್ಮಿ
Author: ವಿಜಯದಾಸ
ಪಾಲಿಸೆ ಪದುಮಾಲಯೆ, ನೀನೇ ಗತಿ
ಬಾಲಕನು ತಾನಾಗಿ ಗೋಪಿಗೆ
ಲೀಲೆಯಿಂದಲಿ ನಂದ ಗೋಕುಲ-
ಬಾಲೆಯರ ಮೋಹಿಸುತ ಅಸುರರ
ಕಾಲನೆನಿಸಿದ ಬಾಲಕನ ಪ್ರಿಯೆ ಅಪ
ಅನ್ಯರ ನೆನೆಯಲೊಲ್ಲೆ ನಿನ್ನಯ ಪಾದ-
ವನ್ನು ನಂಬಿದೆ ನೀ ಬಲ್ಲೆ ತಡಮಾಡದೆ
ಚಿಣ್ಣ ಕರೆಯಲು ಘನ್ನ ಮಹಿಮನು
ಉನ್ನತದ ರೂಪಿನಲಿ ಗುಣಸಂ
ಪನ್ನ ರಕ್ಕಸನನ್ನು ಸೀಳಿದ
ಪನ್ನಗಾದ್ರಿ ನಿವಾಸೆ ಹರಿಪ್ರಿಯೆ ||1||
ಅರಿಯದ ತರಳನೆಂದು ಶ್ರೀಪತಿ ಸತಿ
ಕರುಣದಿ ಸಲಹೆ ಬಂದು ಕರುಣಾಸಿಂಧು
ಸರಸಿಜಾಸನ ರುದ್ರರೀರ್ವರ
ವರದಿ ಮೂರ್ಖನು ಸುರರ ಬಾಧಿಸೆ
ಹರಿವರರ ದಂಡೆತ್ತಿ ಬಹುಮುಖ
ದುರುಳನ ಶಿರ ತರಿದವನ ಪ್ರಿಯೆ ||2||
ಅಜ ಮನಸಿಜ ಜನನಿ ಅಂಬುಜಪಾಣಿ
ಭುಜಗ ಸನ್ನಿಭವೇಣೀ ನಿತ್ಯ ಕಲ್ಯಾಣಿ
ಕುಜನಮದರ್ನ ವಿಜಯವಿಠ್ಠಲ
ಭಜಿಸಿ ಪಾಡುವ ಭಕ್ತಕೂಟವ
ನಿಜದಿ ಸಲಹುವೆನೆಂಬ ಬಿರುದುಳ್ಳವಿಜಯಸಾರಥಿ ವಿಶ್ವಂಭರ ಪ್ರಿಯೆ ||3||