ಪುಣ್ಯ ಕ್ಷೇತ್ರವ ಸ್ಮರಿಸಿ ಧನ್ಯರಾಗಿರೋ
Category: ಶ್ರೀಕೃಷ್ಣ
Author: ವಿಜಯದಾಸ
ಪುಣ್ಯ ಕ್ಷೇತ್ರವ ಸ್ಮರಿಸಿ ಧನ್ಯರಾಗಿರೋ
ನಿಮ್ಮ | ಮುನ್ನೆ ಮಿಕ್ಕಾದಘ ಮಹ ಅನ್ಯಾಯ ಅಳಿದು ಅನು
ಗುಣ್ಯದಲ್ಲಿರೆ ಭವದಾರಣ್ಯ ದಹಿಸುವದು
ಕಾರುಣ್ಯನಿಧಿ ಹರಿ ಒಲಿವಾ
ಶೇಷಪರ್ವತ ಗರುಡಾದ್ರಿ ಶ್ರೀ ಶೈಲ ಪ್ರಭಾಸ
ಕ್ಷೇತ್ರ ಮಧುರೆ ಗೋಕುಲ ವೃಂದಾವನ
ನಾಸಿಕ ತ್ರಿಯಂಬಕ ಮುದ್ಗಲಕ್ಷೇತ್ರ ಪರಾಶರ ಮಗನಾಶ್ರಮ
ತೋಷದಲಿ ತೋತಾದ್ರಿ ಕುಂಭಘೋಣ
ವಾರಣಾಸಿ ಭಾರದ್ವಾಜ ಕ್ಷೇತ್ರ ಅರುಣಾಚಲ
ದೋಷವರ್ಜಿತ ಝಲ್ಲಿಕಾರಣ್ಯ ಸೇತು
ದರ್ಭಶಯನ ಮಧ್ಯಾರ್ಜುನ ||1||
ಸುಂದರ ಸಿಲಾಚಯ ಜಂಬುಕೇಶ್ವರ ಮಹಾನಂದಿ
ಚಿದಂಬರ ವೀರ ರಾಘವ ದೇವ
ಸ್ಕಂದ ನಿಬ್ಬಣಸ್ವಾಮಿ ಕಾರ್ತಿಕ ಖಗಶೇಷ ನಂದ ಯೇಕಾಂಬರೇಶ
ಅಂದವಾದ ಛಾಯ ಅಳಕಾಪುರಿ ಕ್ಷೇತ್ರ
ಮಂದಾಕಿನಿ ಇಪ್ಪ ಸಾಗರ ಯಯಾತಿಗಿರಿ
ಮಂದಮತಿ ಕಳೆವ ಘನಗಿರಿ ಕ್ಷೇತ್ರ ಧರ್ಮಪುರಿ
ಒಂದೊಂದು ಕೋಟೀಶ್ವರಾ ||2||
ಶ್ರೀರಂಗ ಹಸ್ತ ಸಿರಿ ಪಾಂಡುರಂಗ ಕ್ಷೇತ್ರ
ದ್ವಾರಕಾ ಸಿಂಹಾದ್ರಿ ನೀಲಕಂಠನಿಧಿ
ಚಾರು ಗಯ ಚಂಪಕಾರುಣ್ಯ ಪಂಪಾಕ್ಷೇತ್ರ
ವೀರ ನಾರಾಯಣವೋ
ಕಾರುಣ್ಯ ಮಾಳ್ಪ ರಾಮನ ನಗರಿಯು ಮಾಯ
ಕೇದಾರ ಕುರುಕ್ಷೇತ್ರ
ಕೂರ್ಮನಿಧಿ ಸಾರಿದ ಬರುವ ಪುರುಷೋತ್ರಮ
ಪುಷ್ಕರ ಕ್ಷೇತ್ರ ಮಾರಕಾಪುರಿ ಚನ್ನಾ ||3||
ಉದಯಗಿರಿ ರಾಮನಾಥಪುರ ಕಾವೇರಿ
ಉದ್ಭವ ಆದಿ ಅನಂತ ಬಲಕ್ಷೇತ್ರ
ಪದುಮನಾಭ ಪುಂಡರೀಕಾಕ್ಷ ವಿಂಧ್ಯಾದ್ರಿ
ಸುಧಿಯೆಂದು ಕನ್ಯಾಕುಮಾರಿ
ಮಧುರಿ ಅಳಗಿರಿ ತಿಮ್ಮ ಬೇಲೂರಿ ಚೆನ್ನಿಗ
ಮುದದಿ ಮಹಂಕಾಳಿ ಹಸ್ತಿಪಳಿನಾಥ
ಕದಿರಿ ಮಂಗಳ ಗಿರಿತೋರವೀಯ ನರಸಿಂಗ
ಪದ ಮುರಳಿ ತ್ರಿವಿಕ್ರಮ ||4||
ಹರಿಹರ ಗಂಗಾಸಾಗರ ಕಪಿಲಕ್ಷೇತ್ರ ನಿರುಪಮಾದಿ
ಕೂರ್ಮ ನೆಲ್ಲನಪ
ತಿರುಪತಿ ಶೂರ್ಪಾಲಿ ಮಾಬಲೇಶ್ವರ ಭದ್ರಾಚಲ
ಧರಣೀಧರ ಚಾಪವಾಣಿ
ಪರಿಶುದ್ಧ ಭಕ್ತವತ್ಸಲ ಗೌರಿ ವಯ್ಯಾರ ವರಸಾರ
ಕ್ಷೇತ್ರ ಶ್ರೀನಿವಾಸನೆದ ನಿಧಿ
ಪರಮ ಸುಂದರ ಮನ್ನಾರಸ್ವಾಮಿ ಘನಶಾಮವರ
ಗೌರೀ ಮನೋಹರ ||5||
ಶಂಕರನಾರಾಯಣ ಉತ್ತಮರು ಗೋಕರ್ಣ
ಶಂಕರನ ಕ್ಷೇತ್ರ ಗೋಗರ್ಭ ಶೇತುವನ
ಶಂಖಮುಖಿ ಗಜೇಂದ್ರಮೋಕ್ಷ
ಗಜಾರಣ್ಯ ಓಂಕಾರನಾಥ ದೇವಾ
ಪಂಕಜಾಸದನ ಶಿಯ್ಯಾಳಿ ವೈದ್ಯನಾಥ ಠಂಕಾಳಾಂತರ
ವೇದಿ ಗೋಪಾಲನಿಧಿ
ಬಿಂಕದಲಿ ಯಿಪ್ಪ ಚಿಂತಾಮಣಿ ನರಸಿಂಹ
ಅಲಂಕಾರ ಮುಕ್ತಿ ಕ್ಷೇತ್ರ ||6||
ಸಂತಾನಗೋಪಾಲ ತಿಶಿಖ್ರಿನಾರಾಯಣ ಅನಂತಗಿರಿ
ಮಳೂರಪ್ರಮೇಯ ಶಿವಾ
ಅಂತಕನಗೆ ದ್ವಾಪುರತೀರ್ಥ ನಿವರ್ತಿ ಅಂತು ಆದಿಶ್ರೀರಂಗ
ಇಂತು ಪಾನಕ್ಷೇತ್ರ ವಾತಗಿರಿ ನೀಲಾದ್ರಿ ಸಂತು
ನೀಲಾರಣ್ಯ ರಾಜವನ ನೈಮಿಷ
ಕಾಂತರದಕ್ಷ ವನಶಿದ್ಧ ವಟಪುಷ್ಪಗಿರಿ ಕಂತುಹರ ನಂಜು ಭೋಕ್ತ ||7||
ಕೂಲ ಪರ್ವತ ಕಣ್ವಮುನಿಕ್ಷೇತ್ರ ಪಿನಾಕಿಮಾಲಿ
ಅಂದದಲಿಯಿಪ್ಪ ನಿಧಿ ಮಾಧವಸ್ವಾಮಿ
ಮೇಲು ಘಟಿಕಾಚಲ ಬದರಿ ನರಸಿಂಹ ರವಿಸೇತು ಗಣ ಮುಕ್ತೇಶ್ವರ
ಕಾಲದೂತ ಗೆದ್ದ ಕ್ಷೇತ್ರ ಭವಾನಿಗುಡಿ ವ್ಯಾಳನಿಧಿ
ಮಹಾಲಕುಮಿ ರಘುನಾಥ ಶಿವಗಂಗೆ
ಬಾಲಕೃಷ್ಣ ಕ್ಷೇತ್ರ ಕರವೀರ ಪುರ ವಿಶಾಲ ವಿಹಂಗಕ್ಷೇತ್ರ ||8||
ದೇಶದೊಳಗುಳ್ಳ ಪುಣ್ಯ ಕ್ಷೇತ್ರಗಳು ಯೆಣಿಸಿ
ಪೇಳಿದುದಕ್ಕೆ ಆರಿಗೆ ಅಳವಲ್ಲ
ಪ್ರದೋಷ ಕಾಲದಲಿ ಪ್ರಭಾತ ಕಾಲದಲಿ
ನೆನಸೋದು ಮಾನವರು
ಮೀಸಲಾಮನದಲ್ಲಿ ಅನಂತ ಜನುಮದ ದೋಷ ವಿ-
ನಾಶ ವಿಜಯವಿಠ್ಠಲ ಬಂದು ಲೇಸಾಗಿ
ಪಾಲಿಸುವ ಕುಲಕೋಟಿಗಳ||9||