ನೀನ್ಯಾಕೋ ನಿನ್ನ

Category: ಶ್ರೀಕೃಷ್ಣ

Author: ಪುರಂದರದಾಸ

ನೀನ್ಯಾಕೋ ನಿನ್ನ ಹಂಗ್ಯಾಕೋ ರಂಗ
ನಿನ್ನ ನಾಮದ ಬಲವೊಂದಿದ್ದರೆ ಸಾಕೋ ||

ಆ ಮರ ಈ ಮರ ಧ್ಯಾನಿಸುತ್ತಿರುವಾಗ
ರಾಮ ರಾಮ ಎಂಬೋ ನಾಮವೆ ಕಾಯ್ತೋ ||

ಯಮನ ದೂತರು ಬಂದು ಅಜಮಿಳವೆಳೆವಾಗ
ನಾರಾಯಣ ಎಂಬೋ ನಾಮವೆ ಕಾಯ್ತೋ ||

ಕರಿ ಮಕರಗೆ ಸಿಲುಕಿ ಮೊರೆಯಿಡುತಿರುವಾಗ
ಆದಿಮೂಲ ಎಂಬೋ ನಾಮವೆ ಕಾಯ್ತೋ ||

ಪ್ರಹ್ಲಾದನ ಪಿತ ಬಾಧಿಸುತಿರುವಾಗ
ನಾರಸಿಂಹ ಎಂಬೋ ನಾಮವೆ ಕಾಯ್ತೋ ||

ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ
ಕೃಷ್ಣ ಕೃಷ್ಣ ಎಂಬೋ ನಾಮವೆ ಕಾಯ್ತೋ ||

ನಿನ್ನ ನಾಮಕೆ ಸರಿ ಕಾಣೆನೋ ಜಗದಲಿ
ಘನ್ನ ಮಹಿಮ ಶ್ರೀ ಪುರಂದರ ವಿಟ್ಠಲ ||