ಭೀಮ ಶಾಮ ಕಾಮಿನಿಯಾದನು
Category: ಶ್ರೀಮಧ್ವಾಚಾರ್ಯ
Author: ವಿಜಯದಾಸ
ಭೀಮ ಶಾಮ ಕಾಮಿನಿಯಾದನು
ಭೀಮ ಶಾಮ ಕಾಮಿನಿಯಾಗಲು
ಕಾಮನ ಪತಿ ಪುಲೋಮ ಜಿತುವಿನ
ಕಾಮಿನಿ ಸಕಲ ವಾಮ ಲೋಚನೆಯ-
ರಾಮೌಳಿ ಕೂಗುತಲೊಮ್ಮನದಿ ಪಾಡೆ
ದಾಯವಾಡಿ ಸೋತು ರಾಯ ಪಾಂಡವರು
ನ್ಯಾಯದಿಂದ ಸ್ವಾಮಿಯ ಸೇವೆಯೆಂದು
ಕಾಯದೊಳಗೆ ಅಸೂಯೆಪಡದಲೆ
ಮಾಯದಲ್ಲಿ ವನವಾಯಿತೆಂದು
ರಾಯ ಮತ್ಸ್ಯನಾಲಯದೊಳು ತಮ್ಮ
ಕಾಜು ವಡಗಿಸಿ ಅಯೋನಿಜೆ ದ್ರೌಪ-
ದೀಯ ವಡಗೂಡಿ ಆಯಾಸವಿಲ್ಲದೆ
ಅಯ್ವರು ಬಿಡದೆ ತಾವಿರಲು ||1||
ಬಾಚಿ ಹಿಕ್ಕುವ ಪರಿಚಾರತನದಲಾ
ಪಾಂಚಾಲಿಗೆ ಮತ್ಸ್ಯನಾ ಚದುರೆಯಲ್ಲಿ
ಆಚರಣೆಯಿಂದ ಯಾಚಕರಂದದಿ
ವಾಚವಾಡಿ ಕಾಲೋಚಿತಕೆ
ನೀಚರಲ್ಲಿಗೆ ಕೀಚಕನಲ್ಲಿಗೆ
ಸೂಚಿಸಲು ಆಲೋಚನೆಯಿಂದಲಿ
ನಾಚಿಕೆ ತೋರುತಲಾ ಚೆನ್ನೆ ಪೋಗಲು
ನೀಚ ಖೂಳ ಕರ ಚಾಚಿದನು ||2||
ಎಲೆಗೆ ಹೆಣ್ಣೆ ನಿನ್ನೊಲುಮೆಗೆ ಕಾಮನು
ಕಳವಳಿಸಿದ ನಾ ಗೆಲಲಾರೆನಿಂದು
ವಲಿಸಿಕೊ ಎನ್ನ ಲಲನೆಯ ಕರುಣಾ-
ಜಲಧಿಯೆ ನಾರೀ ಕುಲಮಣಿಯೆ
ಬಳಲಿಸದಲೆ ನೀ ಸಲಹಿದಡೇ ವೆ-
ಗ್ಗಳೆಯಳ ಮಾಡಿಪೆನಿಳೆಯೊಳೆನ್ನೆ-ಆ-
ಖಳನಾ ಮಾತಿಗೆ ತಲೆದೂಗುತಲಿ ಅ-
ನಿಳಜನೆನ್ನ ನೀ ಸಲಹೆಂದ ||3||
ಮೌನಿ ದ್ರೌಪದಿ ಮೌನದಲ್ಲಿ
ಹೀನನಾಡಿದಾ ಊನ ಪೂರ್ಣಗಳು
ಮನೋಭಾವವ ಧೇನಿಸಿ ನೋಡುತ್ತ
ಹೀನಕೆ ತಿಳಿದಳು ಮನದಲಿ
ದೀನವತ್ಸಲ ಕರುಣವು ಮೀರಿತು
ಕಾನನದೊಳ್ಕಣ್ಣು ಕಾಣದಂತಾಯಿತು
ಏನು ಮಾಡಲೆಂದು ಜಾಣೆಯು ಚಿಂತಿಸಿ
ಅನಿಲಗೆ ಬಂದು ಮ-ಣಿದಳು||4||
ಚೆಲ್ವೆ ಕಂಗಳೇ ನಿಲ್ಲೆ ನೀ ಘಳಿಗೆ
ಸಲ್ಲದೆ ಆತನ ಹಲ್ಲನು ಮುರಿದು
ಹಲ್ಲಣವ ಹಾಕಿ ಕೊಲ್ಲುವೆ ನಾನೀಗ
ತಲ್ಲಣಿಸದಿರೇ ಗೆಲ್ಲುವೆನೆ
ಪುಲ್ಲನಾಭ ಸಿರಿನಲ್ಲನ ದಯವಿ-
ದ್ದಲ್ಲಿಗೆ ಬಂದಿತು ಎಲ್ಲ ಕಾರ್ಯಗಳ
ಸಲ್ಲಿಸಿ ಕೊಡುವನು ಬಲ್ಲಿದ ನಮಗೆ
ಮಲ್ಲಿಗೆ ಮುಡಿಯಾ ವಲ್ಲಭಳೆ ||5||
ಎಂದ ಮಾತಿಗಾನಂದ ಮಯಳಾಗಿ
ಬಂದಳಾ ಖಳನ ಮಂದಿರದೊಳು ನೀ-
ನೆಂದ ಮಾತಿಗೆ ನಾನೊಂದನು ಮೀರೆನು
ಎಂದು ಕಪಟ ಸೈರಂಧಿರಿಯೂ
ಕುಂದಧಾಭರಣವ ತಂದು ಕೊಡಲು ಆ-
ನಂದದಿಂ ಪತಿಯ ಮುಂದೆ ತಂದಿಟ್ಟಳು
ಮಂದರೋದ್ಧರನ ಚಂದದಿ ಪೊಗಳುತ
ಇಂದು ಸುದಿನವೆಂದ ಭೀಮ||6||
ಉಟ್ಟ ಪೀತಾಂಬರ ತೊಟ್ಟ ಕುಪ್ಪಸವು
ಇಟ್ಟತಿ ಸಾದಿನ ಬಟ್ಟು ಫಣಿಯಲ್ಲಿ
ಕಟ್ಟಿದ ಮುತ್ತಿನ ಪಟ್ಟಿಸ ಕಿವಿಯಲ್ಲಿ
ಇಟ್ಟೋಲೆ ತೂಗಲು ಬಟ್ಟ ಕುಚ
ಘಟ್ಟಿ ಕಂಕಣ ರ್ಯಾಗಟೆ ಚೌರಿ ಅ-
ದಿಟ್ಟಂಥ ಈರೈದು ಬೆಟ್ಟುಗಳುಂಗರ
ಮುಟ್ಟೆ ಮಾನೆರಿ ದಟ್ಟಡಿವೊಪ್ಪತಿ
ಕಟ್ಟುಗ್ರದ ಜಗ ಜಟ್ಟಿಗನು ||7||
ತೋರ ಮೌಕ್ತಿಕದ ಹಾರ ಸರಿಗೆ ಕೇ
ಯೂರ ಪದಕ ಭಂಗಾರ ಕಾಳಿಸರ
ವೀರ ವಿದ್ರುಮದ ಭಾಪುರಿ ಉ-
ತ್ತಾರಿಗೆ ವರ ಭುಜಕೀರುತಿಯು
ಮೂರೇಖೆಯುಳ್ಳ ಉದಾರ ನಾಭಿವರ
ನಾರಿ ನಡು ಉಡುಧಾರ ಕಿಂಕಿಣಿ ಕ-
ಸ್ತೂರಿ ಬೆರಸಿದ ಗೀರುಗಂಧವು ಗಂ-
ಬೂರ ಲೇಪ ಶೃಂಗಾರದಲಿ||8||
ವಂಕಿ ದೋರ್ಯವು ಕಂಕಣ ಒಮ್ಮೆಯೀ-
ನಾಂಕ ಚಾಪ ಭ್ರೂ ಅಲಂಕಾರ ಭಾವ
ಪಂಕಜಮಾಲೆ ಕಳಂಕವಿಲ್ಲದಲೆ
ಸಂಕಟ ಕಳೆವ ಪಂಕಜಾಂಘ್ರಿ
ಝಂಕಾರಕೆ ಲೋಕ ಶಂಕಿಸೆ ನಾನಾ-
ಲಂಕಾರದ ಹೊಸ ಅಂಕುರ ವೀರ-
ಕಂಕಣ ಕಟ್ಟಿದ ಬಿಂಕದಿಂದಲಾ-
ತಂಕವಿಲ್ಲದೆಲೆ ಕಂಕಾನುಜ ||9||
ಕಂಬು ಕೊರಳು ದಾಳಿಂಬ ಬೀಜ ದಂತ
ದುಂಬಿಗುರುಳು ನೀಲಾಂಬುದ ಮಿಂಚೆಂ-
ದೆಂಬ ತೆರದಲಾ ಅಂಬಕದ ನೋಟ
ತುಂಬಿರೆ ಪವಳ ಬಿಂಬಾಧರ
ಜಂಬೀರ ವರ್ಣದ ಬೊಂಬೆಯಂತೆಸೆವ
ತಾಂಬೂಲ ಗಿಳಿಯೆಂಬ ಗಂಭೀರ ಪುರುಷನು
ಹಂಬಲಿಸಿದ ತಾ ಸಂಭ್ರಮದಿ ||10||
ಸಂಧ್ಯಾದೇವಿಯೊ ಇಂದ್ರನ ರಾಣಿಯೊ
ಚಂದ್ರನ ಸತಿಯೋ ಕಂದರ್ಪನಾಕರ-
ದಿಂದ ಬಂದ ಅರವಿಂದದ ಮೊಗ್ಗೆಯೊ
ಅಂದ ವರ್ಣಿಪರಾರಿಂದಿನಲಿ
ಇಂದು ರಾತ್ರಿ ಇದೆ ಎಂದಮರಮುನಿ
ಸಂದೋಹ ಕೊಂಡಾಡೆ ಇಂದುಮುಖಿಯೊಡ
ನಂದು ತಾ ನಾಟ್ಯದ ಮಂದಿರಕೆ ನಗೆ-
ಯಿಂದ ಬಂದ ಕುಂತಿನಂದನನು||11||
ಭಂಡ ಉಡಿಯಲಿ ಕೆಂಡವೊ ಪರರ
ಹೆಂಡರ ಸಂಗ ಭೂಮಂಡಲದೊಳೆನ್ನ
ಗಂಡರು ಬಲು ಉದ್ದಂಡರು ನಿನ್ನನು
ಕಂಡರೆ ಬಿಡರೋ ಹಂಡಿಪರೋ
ಲಂಡ ಬಾಯೆಂದು ಮುಕೊಂಡು ಕೈದುಡುಕಿ
ಅಂಡಿಗೆಳೆದು ಅಖಂಡಲನ ಭಾಗ್ಯ
ಉಂಡು ತೀರಿಸೆನ್ನೆ ಮಂಡೆ ಮೊಗ ಗಲ್ಲ
ಡುಂಡು ಕುಚ ಮುಟ್ಟಿ ಬೆಂಡಾದನು ||12||
ಸಾರಿಯಲ್ಲ ಮಕಮಾರಿಯಿದೆನುತ ಶ-
ರೀರ ವತಿ ಕಠೋರವ ಕಂಡು ಜ-
ಝಾರಿತನಾಗಿ ನೀನಾರು ಪೇಳೆಂದು ವಿ-
ಕಾರದ್ಯಬ್ಬರಿಸಿ ಕೂರ್ರನಾಗಿ
ತೋರು ಕೈಯೆಂದು ಸಮೀರನು ಎದ್ದು ವಿ
ಚಾರಿಸಿಕೋ ಎನ್ನ ನಾರಿತನವೆಂದು
ವೀರ ಮುಷ್ಟಿಯಿಂದ್ಹಾರಿ ಹೊಡೆಯಲು
ಕ್ರೂರನು ರಕ್ತವ ಕಾರಿದನು ||13||
ಹಾರಿ ಹೊಯ್ಯತಲೆ ಮೋರೆಲಿದ್ದ ಕಳೆ-
ಸೂರೆಯಾಯಿತು ಪರನಾರೇರ ಮೋಹಿಸಿ
ಪಾರಗಂಡವರುಂಟೆ ಶರೀರದೊಳಿದ್ದ
ಮಾರುತೇಶ ಹೊರಸಾರಿ ಬರೆ
ಧೀರ ಭೀಮರಾಯ ಭೋರಿಡುತ ಹಾರಿ
ಕೋರ ಮೀಸೆಯನೇರಿಸಿ ಹುರಿಮಾಡಿ
ನಾರಿಮಣಿ ಯಿತ್ತ ಬಾರೆಂದು ಕರೆದು
ಸಾರಿದನು ನಿಜಾಗಾರವನು ||14||
ಸರಸವು ನಿನಗೆ ವಿರಸವು ಆಯಿತು
ಕರೆಸೆಲೊ ಈ ಪುರದರಸಾ ಕಳ್ಳನ
ನರಸಿಂಹನ ನಿಜ ಅರಸಿಗೆ ಮನವನು
ವೆರೆಸಿದ್ಯೋ ಮಂದರ ಅರಸನೆ
ಅರಸಿ ನೋಡುತಿರೆ ವರೆಸಿದನಾ ಜೀವ
ದೊರಸೆಯ ಖೂಳನ ಬೆರೆಸಿ ಸವಾಂಗ
ವಿರಿಸಿ ಅಲ್ಲಿಯೆ ಸಿರಿ ವಿಜಯವಿಠ್ಠಲ
ಅರಸಿನ ಲೀಲೆಯ ಸ್ಮರಿಸುತಲಿ ||15||