ನೀ ಮಾಯೆಯೊಳಗೋ
Category: ಶ್ರೀಕೃಷ್ಣ
Author: ಕನಕದಾಸ
ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ
ನೀ ದೇಹದೊಳಗೋ ನಿನ್ನೊಳು ದೇಹವೋ ||
ಬಯಲು ಆಲಯದೊಳಗೋ ಆಲಯವು ಬಯಲೊಳಗೋ
ಬಯಲು ಆಲಯವೆರಡೂ ನಯನದೊಳಗೋ |
ನಯನ ಬುದ್ದಿಯ ಒಳಗೋ ಬುದ್ದಿ ನಯನದ ಒಳಗೋ
ನಯನ ಬುದ್ಧಿಗಳೆರಡೂ ನಿನ್ನೊಳಗೋ ಹರಿಯೇ ||
ಸವಿಯು ಸಕ್ಕರೆಯೊಳಗೋ ಸಕ್ಕರೆಯು ಸವಿಯೊಳಗೋ
ಸವಿಯು ಸಕ್ಕರೆಯೆರಡೂ ಜಿಹ್ವೆಯೊಳಗೋ |
ಜಿಹ್ವೆ ಮನಸಿನ ಒಳಗೋ ಮನಸು ಜಿಹ್ವೆಯ ಒಳಗೋ
ಜಿಹ್ವೆ ಮನಸುಗಳೆರಡೂ ನಿನ್ನೊಳಗೋ ಹರಿಯೇ ||
ಕುಸುಮದೊಳು ಗಂಧವೋ ಗಂಧದೊಳು ಕುಸುಮವೋ
ಕುಸುಮಗಂಧಗಳೆರಡೂ ಘ್ರಾಣದೊಳಗೋ |
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೋ ||