ಅಳಿಸಂಕುಲವೇ ಮಾಮರವೇ
Category: ಶ್ರೀಶಿವ
Author: ಅಕ್ಕಮಹಾದೇವಿ
ಅಳಿಸಂಕುಲವೇ ಮಾಮರವೇ
ಬೆಳುದಿಂಗಳೇ ಕೋಗಿಲೆಯೇ
ನಿಮ್ಮ ನಿಮ್ಮನ್ನೆಲ್ಲರನು ಒಂದ ಬೇಡುವೆನು
ಚನ್ನ ಮಲ್ಲಿಕಾರ್ಜುನದೇವರ ಕಂಡರೆ ಕರೆದು ತೋರಿರೆ
ಚಿಲಿಮಿಲಿ ಎಂದೋದುವ ಗಿಳಿಗಳಿರಾ,
ನೀವು ಕಾಣಿರೇ ನೀವು ಕಾಣಿರೇ
ಸರವೆತ್ತಿ ಪಾಡುವ ಕೋಗಿಲೆಗಳಿರಾ,
ನೀವು ಕಾಣಿರೇ ನೀವು ಕಾಣಿರೇ
ಎರಗಿ ಬಂದಾಡುವ ತುಂಬಿಗಳಿರಾ,
ನೀವು ಕಾಣಿರೇ ನೀವು ಕಾಣಿರೇ
ಕೊಳತಡಿಯೊಳಾಡುವ ಹಂಸೆಗಳಿರಾ,
ನೀವು ಕಾಣಿರೇ ನೀವು ಕಾಣಿರೇ
ಗಿರಿ ಗಹ್ವರದೊಳಗಾಡುವ ನವಿಲುಗಳಿರಾ,
ನೀವು ಕಾಣಿರೇ ನೀವು ಕಾಣಿರೇ
ಚನ್ನಮಲ್ಲಿಕಾರ್ಜುನನೆಲ್ಲಿರ್ದಿಹನೆಂದು
ನೀವು ಹೇಳಿರೇ ನೀವು ಹೇಳಿರೇ