ನೋಡಿರಣ್ಣ ನೀವೆಲ್ಲ ಬಂದು
Category: ಶ್ರೀರಾಮಕೃಷ್ಣ
Author: ಹೆಚ್ ಎನ್ ಮುರಳೀಧರ
ನೋಡಿರಣ್ಣ ನೀವೆಲ್ಲ ಬಂದು ಈ ನೂತನ ಮಾನವನ |
ತ್ಯಾಗ - ವಿವೇಕದ ಚೀಲಗಳೆರಡನು ಹೆಗಲಲಿ ಹೊತ್ತಿಹನ ||
ಗಂಗೆಯ ದಡದಲಿ ಹೊರಳುತ 'ತಾಯಿ' ಎನ್ನುತ ಕೂಗುವನು |
'ಕಾಣದೆ ನಿನ್ನನು ದಿನಗಳುರುಳುತಿವೆ' ಎನ್ನುತ ಮರುಗುವನು ||
ನಂಬದ ನೆಚ್ಚದ ಮಂದಮತಿಗಳಿಗೆ ಸರಳಕಥೆಯ ಹೇಳಿ |
ಕಾಳಿಯು ಕೃಷ್ಣನು ಒಂದೇ ಎನ್ನುತ ಸಾರುತಿಹನು ಕೇಳಿ ||
ಅಕ್ವಾ-ವಾಟರ್-ಪಾನಿ-ವಾರಿಗಳು ನೀರಿಗೊಂದೆ ಹೆಸರು |
ಅಲ್ಲಾ-ಜೀಸಸ್-ಮೋಸೆಸ್-ಕಾಳಿಯರು ಪರಬ್ರಹ್ಮನುಸಿರು ||
ಪಂಡಿತ - ಪಾಮರ - ಬಡವನು - ಬಲ್ಲಿದ ಭೇದ ತೋರಲಿಲ್ಲ|
ಜಾತಿಮತಗಳಾ ರೀತಿನೀತಿಗಳ ಮನಕೆ ತಾರಲಿಲ್ಲ ||
ದಿವ್ಯೋನ್ಮಾದದಿ ಬಾಹುಗಳೆರಡನು ಬೀಸಿ ಕರೆಯುತಿಹನು |
ತಾಮಸಗೈಯದೆ ಎಲ್ಲರು ಬೇಗನೆ ಬನ್ನಿರೆನ್ನುತಿಹನು ||
ಜಗದ ಜನಗಳಿಗೆ ಕೃಪೆಯನು ತೋರಲು ಕಾತರಗೊಂಡಿಹನು |
ಭವಸಾಗರವನು ದಾಟಿಸೆ ನೌಕೆಯ ತಂದು ಕಾಯುತಿಹನು ||