ರಾಘವೇಂದ್ರ ಗುರುರಾಯ
Category: ಶ್ರೀಗುರು ರಾಘವೇಂದ್ರ
Author: ವಿಜಯದಾಸ
ರಾಘವೇಂದ್ರ ಗುರುರಾಯ ರಮಣೀಯ ಕಾಯ
ರಾಘವೇಂದ್ರ ಪಾದಾಂಬುಜ ಭೃಂಗ ಭವ ಭಯ ಭಂಗ
ನೋಡಿದೆ ನಿಮ್ಮ ಮಹಿಮೆಯ ಹಾಡಿ ಪಾಡುವೆನೊ ನಿತ್ಯ
ಆಡಿ ಕೊಂಡಾಡಲು ಬಲು ಗೂಢವಾಗಿದೆ
ನಾಡಿನೊಳಗೆ ವೊಮ್ಮೆ ಸ್ಮರಣೆ ಮಾಡಿದವ ಧನ್ಯ ಎನ್ನು
ಮೂಢ ಬುದ್ಧಿಯನು ಬಿಡಿಸು ಕೂಡಿಸು ಸಜ್ಜನರೊಳಗೆ ||1||
ನಾಮಾಭಿವಿಡಿದು ಉಮಾಪತಿ ಪರಿಯಂತ
ಈ ಮನ ಎರಗಲಿ ಯಾಮ ಯಾಮಕೆ
ಕಾಮಿಪೆ ಇದನೆ ಗುರುವೆ ವಾಮದಕ್ಷಣ ಮಾರ್ಗ
ನೇಮ ತಪ್ಪುದಂತೆ ತಿಳಿಸಿ ಭ್ರಾಮ ಬುದ್ಧಿಯ ಓಡಿಸುವುದು ||2||
ಚಿಂತಾಮಣಿ ಕಂಡ ಮೇಲೆ ಭ್ರಾಂತಿಗೊಳಿಪ ವಿಷಯ
ಚಿಂತಿಸಿ ಬೇಡುವುದು ಲೋಕಾಂತದ ಸುಖವು
ಇಂತು ಬಾಗಿ ನಿಂತು ಕೇಳುವಂತೆ ಮಾಡದಿರು ಕರುಣಿ
ಸಂತತ ನಿನ್ನ ಪಾದಕ್ರಾಂತನಾಗಿ ತುತಿಸುವೆ||3||
ಸಾರಿಸಾರಿಗೆ ಈ ಚಿತ್ರ ತಾರತಮ್ಯವ ವಿಚಾರಗೈದು ನಲಿದಾಡಿ
ಮೇರೆ ಇಲ್ಲದೆ ಕೋಶ ಇಂದಿರೇಶನ್ನ ಹೃ
ದ್ವಾರಿಜದೊಳು ನಿಲಿಸಿ
ಆರಾಧನೆ ಮಾಡುವ ವೈಕಾರಿಕ ಭಾಗ್ಯವೆ ಬರಲಿ ||4||
ನಮೋ ನಮೋ ಯತಿರಾಜ ಮಮತೆ ರಹಿತ ಅನುಪಮ ಚರಿತಾ
ಚಾರುಹಾಸನೆನಿಪ ನಿನ್ನ ಹೆಮ್ಮೆಯಿಂದಲಿಪ್ಪ
ಪರಬೊಮ್ಮ ವಿಜಯವಿಠಲ ನಾ
ತುಮ್ಮದೊಳಚಿನಪ ಜ್ಞಾನೋತ್ತುಮ ತುಂಗಭದ್ರವಾಸ ||5||