ರಾಜಕುಲ ವನರಾಶಿ ರಾಜರಾಜೇಶ್ವರಾ
Category: ಶ್ರೀಕೃಷ್ಣ
Author: ವಿಜಯದಾಸ
ರಾಜಕುಲ ವನರಾಶಿ ರಾಜರಾಜೇಶ್ವರಾ |
ರಾಜೀವ ನಯನ ಯದುರಾಜ ಎಲೊ ಭಾಪುರೆ
ಗರಳ ಪೇರ್ಮೊಲೆಯಿತ್ತ ಅಸುರಿಯಳ ಸಂಹರಿಸಿ |
ಮರಳಿ ಅವಳಿಗೆ ಉತ್ತಮ ಗತಿಯನಿತ್ತೆ |
ದುರಳ ಶಕಟಾಸುರನ ಚರಣ ದುಂಗುಟದಲ್ಲಿ
ತರಳಾಟದಿಂದ ಮರ್ದಿಸಿದೆ ಎಲೆ ಭಾಪುರೆ ||1||
ಸುರಪ ಗರ್ವಿಸೆ ಸಪ್ತದಿನ ಮಳೆಗರಿಯೆ ವ್ರಜ |
ಪುರವ ಪಾಲಿಸಿದೆ ಕಾಳಿಂಗನೈದು |
ಸಿರದಲ್ಲಿ ತುಳಿದು ರಮಣ ದ್ವೀಪಕೆ ಕಳುಹಿ |
ಪರಿಪರಿಯ ಖಳರ ಮರ್ದಿಸಿದೆ ಎಲೊ ಭಾಪುರೆ ||2||
ಕರೆಯ ಬಂದಾ ಕ್ರೂರ ಭಕ್ತನಿಗೆ ಯಮುನೆಯಲಿ |
ಕರುಣದಿಂದಲಿ ನಿಜರೂಪ ತೋರಿ |
ಭರದಿಂದ ಕರಿರಾಜ ಕರಿಯೆ ಬಿಲ್ಲು ಮಲ್ಲರ
ಮುರಿದು ಧರಿಗೆ ವರಿಸಿದೆ ಕಂಸನ ಎಲೆ ಭಾಪುರೆ ||3||
ವನಧಿಯೊಳು ಪುರ ಬಿಗಿದು ಕಾಲಯವನನ ಸದೆದು |
ಅನಿಲ ಸುತನಿಂದ ಮಾಗಧನ ಕೊಲ್ಲಿಸಿ |
ವನಿತೆಯರ ಸೆರೆ ಬಿಡಿಸಿ ಸೂತತನವನೆ ವೊಹಿಸಿ |
ಫಲ್ಗುಣಗೆ ವಿಶ್ವರೂಪವ ತೋರಿದೆ ಎಲೊ ಭಾಪುರೆ ||4||
ಗುರು ಭೀಷ್ಮ ಶಲ್ಯ ಶಕುನಿ ಸುಬಲ ಭಗದತ್ತ |
ತರಣಿಸುತ ದುಶ್ಶಾಸ ಕೌರವೇಶಾ |
ಎರಡು ಬಲ ವ್ಯಾಜ್ಯದಲಿ ಭೂಭಾರನಿಳುಹಿ ಸಾ |
ವಿರ ತೋಳ ಖಳನ ಭಂಗಿಸಿದೆ ಎಲೊ ಭಾಪುರೆ||5||
ದ್ವಾರಕಾಪುರದಲ್ಲಿ ನಾರದಗೆ ಸೋಜಿಗವ |
ತೋರಿದೆ ಒಬ್ಬೊಬ್ಬ ನಾರಿಯಲಿ |
ನಾರಿಯರ ಕೂಡ ಬಲು ಕ್ರೀಡೆಗಳನಾಡಿ ಅ |
ವರ ಸಂತಾನವನು ಪಡದೆ ಎಲೊ ಭಾಪುರೆ ||6||
ವರ ಚಂದ್ರಹಾಸ ಮಿಗಿಲಾದ ಭೂಪಾಲಕರ |
ಕರೆಸಿ ಪಾಂಡುವರ ಯಾಗವನೆ ಮುಗಿಸಿ |
ಹರುಷದಲಿ ಯದುಕುಲವಾಸ ಮಾಡಿದೆ |
ಪರಮ ಪುರುಷ ವಿಜಯವಿಠ್ಠಲನೆ ಎಲೆ ಭಾಪುರೆ ||7||