ರಾಮ ಜಾನಕೀರಮಣ ರಾಜೀವದಳನಯನ
Category: ಶ್ರೀರಾಮ
Author: ವಿಜಯದಾಸ
ರಾಮ ಜಾನಕೀರಮಣ ರಾಜೀವದಳನಯನ
ಧಾಮ ನಿಧಿವಂಶ ಸೋಮನಿಗೆ
ಪದುಮಶಾಲೆಯೊಳಗೆ ಪದುಮಗದ್ದುಗೆ ಹಾಕಿ
ಪದುಮನಾಭನು ಬಂದು ಕುಳಿತನು
ಪದುನುನಾಭನು ಬಂದು ಕುಳಿತನು ಎಡದಲ್ಲಿ ಪದುಮಾಕ್ಷಿ
ಪದುಮ ಸಾಧನೆ ಲಕುಮಿ ಒಪ್ಪಿದಳು. ||1||
ವಾಣಿ ಭಾರತಿ ಖಗಪರಾಣಿ ವಾರುಣಿ ಗಿರಿಜೆ
ಮೀನಕೇತನ ರಾಣಿ ಇಂದ್ರಾಣಿ ಮಿಕ್ಕಾನಲಿದಾಡುತಲಿ
ಮೀನಕೇತನ ರಾಣಿ ಇಂದ್ರಾಣಿ ನಕ್ಕು ನಲಿದಾಡುತಲಿ
ಆನಂದದಿ ಬಂದು ಕುಳಿತರು ತಮ್ಮ ಠಾಣೆಗೆ ||2||
ಚಿನ್ನದ ತಳಿಗೇಲಿ ಎಣ್ಣೆ ಅರಿಶಿಣ ಗಂಧ
ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ
ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ
ಹೆಣ್ಣುಗಳ ಮಧ್ಯೆ ಇಳಿಸಿದರು||3||
ತಂದೆ ತಾತನ ಬಳಿಯ ಮಂದಾಕಿನಿ ವಾಗ್ವಿಯ-
ರೊಂದಾಗಿ ಒಡಗೂಡಿ ರಂಗಯ್ಯನ ಕೈಗೆ
ಒಂದಾಗಿ ಒಡಗೂಡಿ ರಂಗಯ್ಯನ ಕೈಯೊಳಗೆ
ತಂದು ಅರಿಶಿಣ ಎಣ್ಣೆ ಗಂಧವಿತ್ತು||4||
ತಡಮಾಡಲಾಗದು ಕಡಲಶಯನ ನಿಮ್ಮ
ಮಡದಿಯಂಗಕ್ಕೆ ತೊಡೆವುದೆನಲು
ಮಡದಿಯಂಗಕ್ಕೆ ತೊಡೆವುದು ಎನಲಾಗಿ
ಕಡು ಹರುಷದಿ ಸತಿಯಳ ನೋಡಿದನು ||5||
ಎನ್ನರಸಿ ಹೊನ್ನರಸಿ ಪ್ರಾಣದರಸಿ ಪಟ್ಟದರಸಿ |
ಕನ್ಯೆ ಶಿರೋಮಣಿ ಪಾವನ ದೇಹಿ ||
ಕನ್ಯೆ ಶಿರೋಮಣಿ ಪಾವನ ದೇಹಳೆ ನಿನ್ನ |
ಕನ್ನಡಿ ಮುಖವ ತೋರರಿಷಿಣವ ನಾ ಹಚ್ಚುವೆ ||6||
ತಂದೆ ನಂದನರಿಗೆ ಬಂಧು ಬಳಗ ಸುತ್ತ |
ಹೊಂದಿದ ಜನರಿಗೆ ಹಲವರಿಗೆ ||
ಹೊಂದಿದ ಜನರಿಗೆ ಹಲವರಿಗೆ ಕದನ |
ತಂದು ಹಾಕುವಳೆಂದು ಹಚ್ಚಿದನು ||7||
ತೂಗಿಸಿಕೊಂಬುವಳೆ ದೌತ್ಯಕ್ಕೆ ಸಲ್ಲುವಳೆ |
ಬಾಗಿಲ ಕಾಯಿಸುವಳೆ ಬಲ್ಲಿದರ ||
ಬಾಗಿಲಕಾಯಿಸುವಳೆ ಬಲ್ಲಿದರನು ಬಿಡದೆ |
ಸಾಗರನ ಮಗಳು ಎಂದು ತೊಡೆದನು ||8||
ಇಂದಿರಾದೇವಿ ಬಾ ಮಂದಿರಾಂಬುಜ ರಾಮ |
ಸುಂದರ ಶ್ರೀವಾರಿ ಮಂಗಳಗಾತ್ರೆ ||
ಸುಂದರ ಶ್ರೀನಾರಿ ಮಂಗಳಗಾತ್ರೆ ಯೆಂದು |
ಅಂಗಜ ಜನಕನು ನಗುತಲಿದ್ದ ||9||
ರಮಣಿಯ ದೇಹಕ್ಕೆ ಕಮಲನಾಭನು ಎದ್ದು |
ವಿಮಲಕಸ್ತೂರಿ ಗಂಧವರಿಷಿಣ ಎಣ್ಣೆ ||
ವಿಮಲ ಕಸ್ತೂರಿ ಗಂಧವರಿಷಿಣ ಎಣ್ಣೆಯ |
ಕ್ರಮದಿಂದ ಲೇಪಿಸಿ ಊಟಣಿಸಾರಿ ||10||
ಸಾಕಾರಗುಣವಂತಿ ತ್ರಿಲೋಕದ ಜನನಿ |
ನಾಕಜವಂದಿತಳೆ ನಾಗಗಮನೆ ||
ನಾಕಜವಂದಿತಳೆ ನಾಗಗಮನೆ ಏಳೂ |
ಶ್ರೀಕಾಂತನ ಸೇವೆಯ ಮಾಡೆಂದರು ||11||
ಅಂದ ಮಾತನು ಕೇಳಿ ಗಂಧ ಅರಷಿಣ ಕೊಂಡು |
ನಿಂದು ಸಮ್ಮುಖದಲ್ಲಿ ರಂಗನ ನೋಡಿ |
ನಿಂದು ಸಮ್ಮುಖದಲ್ಲಿ ರಂಗನ ನೋಡಿ ಹಿಗ್ಗಿ |
ಚಂದ್ರವದನೆ ಪತಿಗೆ ಹಚ್ಚಿದಳು ||12||
ಗೋವಳರ ಎಂಜಲು ಆವಾಗ ತಿಂದವನೆ |
ಮಾವನ್ನ ಕೊಂದವನೆ ಮಾಯಾಕಾರ ||
ಮಾವನ್ನ ಕೊಂದವನೆ ಮಾಯಾಕಾರನೆ ನಿನ್ನ |
ಸೇವೆಗೆ ಶಕ್ತಳೆನುತ ಹಚ್ಚಿದಳು ||13||
ಬೆಣ್ಣೆ ಮೊಸರು ಕದ್ದು ಹೆಣ್ಣುಗಳ ಕೆಡಿಸಿ |
ಮುನ್ನೆ ತೊತ್ತಿನ ಮಗನ ಮನಿಯ ಉಂಡ ||
ಮುನ್ನೆ ತೊತ್ತಿನ ಮಗನ ಮನಿಯಲುಂಡ ಹಿಂದೆ |
ಹೆಣ್ಣಾಗಿ ಇದ್ದವನೆಂದು ಹಚ್ಚಿದಳು ||14||
ಎನ್ನರಸ ಚೆನ್ನರಸ ಪ್ರಾಣದರಸ ಪಟ್ಟಣದರಸ |
ಭಿನ್ನವಖಿಳ ಜೀವಕ್ಕೆನ್ನ ಒಡೆಯ ||
ಭಿನ್ನವಖಿಳ ಜೀವಕ್ಕೆನ್ನ ಒಡೆಯ ಸಲಹಿಂದು |
ಚೆನ್ನಾಗಿ ಅರಿಷಿಣ ಗಂಧ ಹಚ್ಚಿದಳು ||15||
ನಿತ್ಯ ಕಲ್ಯಾಣ ಪುರುಷೋತ್ತಮ ಸರ್ವೇಶ |
ಸತ್ಯಸಂಕಲ್ಪ ಸಿದ್ಧ ಅಪ್ರಮೇಯಾ ||
ಸತ್ಯಸಂಕಲ್ಪ ಸಿದ್ಧ ಅಪ್ರಮೇಯನೆಂದು |
ಮಿತ್ರೆ ಸರ್ವಾಂಗಕ್ಕೆ ಹಚ್ಚಿದಳು ||16||
ದೇವಿ ದೇವೇಶಗೆ ಈ ಉರುಟಣೆಯಿಲ್ಲ |
ಆವಾವ ಬಗೆ ಎಲ್ಲ ತೋರಿಸುತ್ತ ||
ಆವಾವ ಬಗೆ ಎಲ್ಲ ತೋರಿ ವಧು-ವರಗಳಿಗೆ |
ಹೂವು ಬಾಸಿಂಗವ ರಚಿಸಿದರು||17||
ಅಸುರ ವಿರೋಧಿ ವಸುದೇವನಂದನ |
ಪಶುಪತಿ ರಕ್ಷಕ ಪರಮ ಪುರುಷ ||
ಪಶುಪತಿ ರಕ್ಷಕ ಪರಮ ಪುರುಷ ಎಂದು |
ಹಸನಾಗಿ ಲೇಪಿಸಿ ಇತ್ತ ಜನರ ||18||
ಶೃಂಗಾರವಂತೇರು ರಂಗ ಶ್ರೀಲಕುಮಿಗೆ |
ಮಂಗಳಾರತಿ ಎತ್ತಿ ಹರಸಿದರು ||
ಮಂಗಳಾರತಿ ಎತ್ತಿ ಹರಸಿ ದೇವರಮನೆಗೆ |
ಅಂಗನೆಯಳ ಸಹಿತ ನಡೆಯೆಂದರಾಗ ||19||
ಎತ್ತಿಕೊಂಡನು ರಂಗ ಚಿತ್ತದ ವಲ್ಲಭೆಯ |
ಮತ್ತೆ ಸುಗಂಧಿಯರು ಹೊಸ್ತಿಲೊಳಗೆ ||
ಮತ್ತೆ ಸುಗಂಧಿಯರು ಹೊಸ್ತಿಲೊಳಗೆ ನಿಂದು |
ಪತ್ನಿಯ ಹೆಸರು ಪೇಳೆಂದರು ಆಗ ||20||
ಬೇಗ ಮಾರ್ಗವ ಸಾರಿ ತೂಗಲಾರನು ಇವಳ |
ಸಾಗಿ ಪೋಗುವನೆಂದು ಪೇಳುತಿರಲು ||
ಸಾಗಿ ಪೋಗುವನೆಂದು ಪೇಳುತಿರಲು ಸ್ತ್ರೀ ಕೂಟ |
ತೂಗವದೆಂತು ನಾಳೆ ನುಡಿಯೆಂದರು ||21||
ನಕ್ಕು ಸಂತೋಷದಲಿ ರುಕ್ಮಿಣಿ ಎಂದನು |
ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ ||
ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ ಎನಲು |
ಚಕ್ರಪಾಣಿ ಎಂದು ಪೇಳಿದಳು ಲಕುಮಿ ||22||
ಗಂಡ ಹೆಂಡತಿ ಪೋಗಿ ದಂಡ ಪ್ರಣಾಮಮಾಡಿ |
ಮಂಡಲದ ಚರಿತೆ ತೋರಿದರು ಆಗ ||
ಮಂಡಲದ ಚರಿತೆ ತೋರಿ ವಧು-ವರಗಳಿಗೆ |
ಕಂಡವರಿಗೆ ಮದುವೆಯೆನಿಸಿದರು ||23||
ದಂಪತಿಗಳು ಒಲಿದು ಇಂಪಾಗಿ ಉರುಟಣಿ |
ಸೊಂಪಾಗಿ ಮಾಡಿದರು ಅನೇಕವಾಗಿ ||
ಸೊಂಪಾಗಿ ಮಾಡಿದವರ ಕತೆಗಳ ಕೇಳಲು
ಸಂಪತ್ತು ಕೊಡುವನು ವಿಜಯವಿಠ್ಠಲರಾಯಾ ||24||