ರಾಮ ರಾಮ ಎಂಬೆರಡಕ್ಷರ

Category: ಶ್ರೀರಾಮ

Author: ವಿಜಯದಾಸ

ರಾಮ ರಾಮ ಎಂಬೆರಡಕ್ಷರ |
ಪ್ರೇಮದಿ ಸಲುಹಿತು ಸುಜನರನು

ಹಾಲಾಹಲವನು ಪಾನವಮಾಡಿದ |
ಫಾಲಲೋಚನನೆ ಬಲ್ಲವನು ||
ಆಲಾಪಿಸುತ್ತ ಶಿಲೆಯಾಗಿದ್ದ |
ಬಾಲೆ ಅಹಲ್ಯೆಯ ಕೇಳೇನು ||1||

ಅಂಜಿಕೆಯಿಲ್ಲದೆ ಗಿರಿಸಾರಿದ ಕಪಿ-|
ಕುಂಜರ ರಮಿಸುತ ಬಲ್ಲವನು ||
ಎಂಜಲ ಫಲಗಳ ಹರಿಗರ್ಪಿಸಿದ |
ಕಂಜಲೋಚನೆಯ ಕೇಳೇನು ||2||

ಕಾಲವರಿತು ಸೇವೆಯ ಮಾಡಿದ
ಲೋಲ ಲಕ್ಷ್ಮಣನೆ ಬಲ್ಲವನು ||
ವ್ಯಾಳಶಯನ ಶ್ರೀ ವಿಜಯವಿಠ್ಠಲನ
ಲೀಲೆ ಶರಧಿಯ ಕೇಳೇನು||3||