ಲಿಂಗಾ ಎನ್ನಂತರಂಗ

Category: ಶ್ರೀರಾಮ

Author: ವಿಜಯದಾಸ

ಲಿಂಗಾ ಎನ್ನಂತರಂಗ
ಮಂಗಳಾಂಗ ಸರ್ವೋ-ತುಂಗನೆ ರಾಮ

ಮಂದಾಕಿನೀಧರಗೆ ಗಂಗಾಂಬು ಮಜ್ಜನವೆ
ಚಂದ್ರಮೌಳಿಗೆ ಗಂಧ ಕುಸುಮಾರ್ಪಣೆಯೆ
ಇಂದು ರವಿನೇತ್ರಗೆ ಕರ್ಪೂರದಾರತಿಯೆ
ಕಂದರ್ಪಜಿತಗೆ ಮಿಗಿಲಾಪೇಕ್ಷೆಯೆ ರಾಮಾ ||1||

ಘನವಿದ್ಯಾತುರಗೆ ಮಂತ್ರಕಲಾಪವೆ
ಧನವತಿಯ ಸಖಗೆ ಕೈಕಾಣಿಕೆಯೆ
ಮನೆರಜತ ಪರ್ವತಗೆ ಫಣಿಯ ಆಭರಣವೆ
ಮನೋ ನಿಯಾಮಕಗೆನ್ನ ಬಿನ್ನಹವೆ ರಾಮಾ||2||

ವೈರಾಗ್ಯ ನಿಧಿಗೆ ಈ ವಿಷಯ ಪದಾರ್ಥವೆ
ಗೌರಿಯ ರಮಣಗೆ ಈ ಸ್ತೋತ್ರವೆ
ವೀರ ರಾಘವ ವಿಜಯವಿಠ್ಠಲ ನಿಜಹಸ್ತ
ವಾರಿಜದಳದಿಂದುದ್ಭವಿಸಿದ ಮಹಾ ||3||