ಲಿಂಗಾಭವ ಭಸಿತಾಂಗ ಅಂಗಜಮದ ಭಂಗ
Category: ಶ್ರೀಶಿವ
Author: ವಿಜಯದಾಸ
ಲಿಂಗಾಭವ ಭಸಿತಾಂಗ ಅಂಗಜಮದ ಭಂಗ
ಶೃಂಗಾರ ಗುಣನಿಧಿ ಕೃಪಾಂಗ ಎನ್ನನು ಕಾಯೊ
ರಜತಪರ್ವತವಾಸ ಸುಜನ ಮನವಿಲಾಸ
ಅಜನಂದನ ರುದ್ರ ವೀರಭದ್ರಾ
ಕುಜನಮತವನು ಬಿಡಿಸೊ ನಿಜಪಥವ ತೋರಿ
ಭುಜಗಭೂಷಣ ಸಾಂಬ ಪ್ರಾಣ ಪ್ರತಿಬಿಂಬ ||1||
ನೀಲಕಂಧರ ವಿಶಾಲಗುಣ ಸುಂದರ
ಫಾಲಲೋಚನ ಭಜಕ ಕಾಲಹರ ಪಾರ್ವತಿ
ಲೋಲ ಭಕ್ತರ ಪಾಲ
ಪಾಲಯ ಶ್ರೀ ಸಿರಿ ಲೊಲನಪ್ರಿಯ ||2||
ದುರ್ವಾಸ ಶುಕಮುನಿಯೆ ಉರ್ವಿಯಾಳ್ ನಿನಗೆಣೆಯೆ
ಓರ್ವ ಮೂಕನ ಕೊಂದು ಮರಳೆ ಬಂದು
ದೇವ ದೇವ ನಮ್ಮ ವಿಜಯವಿಠ್ಠಲರೇಯ
ಸರ್ವೋತ್ತಮನೆಂಬ ನಾಮರಸ ಉಂಟಾ ||3||