ವಾಣೀ ನೀ ತೋರೆ ವಾರಿಜನಾಭನ,
Category: ಶ್ರೀಸರಸ್ವತಿ
Author: ವಿಜಯದಾಸ
ವಾಣೀ ನೀ ತೋರೆ ವಾರಿಜನಾಭನ, ಮಹಾಲಾಭನ್ನ
ನಿತ್ಯ ಸುಲಭನ ಭಾನು ಸನ್ನಿಭನ
ಕ್ಷೋಣೀಯೊಳಗಣ ಪ್ರಾಣಶ್ರೇಷ್ಠ - ಜಗ
ತ್ರಾಣನ ತೋರಿಸೆ ಭಾನು ಸನ್ನಿಭಳೆ
ಚೈತನ್ಯರಾಣಿ ಪುಸ್ತಕಪಾಣಿ-ಸುನೀಲವೇಣಿ
ಅತ್ಯಂತ ಮಹಿಮೆ ಗುಣಗುಣಶ್ರೇಣಿ ತ್ರಿಲೋಕ ಜನನಿ
ಸತ್ಯವ ತೋರುತ ನಿತ್ಯೋಪಾದಿಲಿ
ದೈತ್ಯರ ಮರ್ದಿಸಿ ಮುಕ್ತಿಯ ಕೊಡುತಿಹ
ಸತ್ಯ ಸಂಕಲ್ಪಳೆ ನಿತ್ಯದಿ ಪೂಜಿಪೆ
ತ್ವತ್ಪಾದಾಂಬುಜವಿತ್ತು ನೀ ಸಲಹೆ1
ನಾಲಿಗೆಯಲ್ಲಿ ಬಂದು ನಿಂದು ದಯದಿಂದ ಇಂದು
ಶ್ರೀಲೋಲ ಹರಿಯೆ ದೈವವೆಂದು ಕೊಂಡಾಡೆ ಮುಂದು
ಬೀಳುವ ಭವಣೆಯ ಕಾಲ ಹಿಂಗಿಸಿ ವಿ-
ಶಾಲ ಮತಿಯ ಕೊಟ್ಟು ಆಳುಗಳೊಡನೆ ಸು-
ಶೀಲ e್ಞÁನವಿತ್ತು ಆಲಸ್ಯಮಾಡದೆ
ಶೀಲ ಮುಕ್ತಿಗನುಕೂಲವಾಗುವುದಕ್ಕೆ2
ಜನ್ಮ ಬಂದಿದೆ ಕಡೆಗೆ ಮಾಡು ದಯದಿಂದ ನೋಡು
ಘನ ಕೀರ್ತಿವಂತೆ ಅಭಯವ ನೀಡು, ನಿನಗಲ್ಲ ಈಡು
ಕನಸಿಲಿ ಮನಸಿಲಿ ಮನಸಿಜನೈಯನ
ನೆನೆಸುವ ಸೌಭಾಗ್ಯವನುದಿನ ಕೊಟ್ಟು
ಘನಪ್ರೇರಣೆಯಿಂದ ವಿಜಯವಿಠ್ಠಲನಂಘ್ರಿ
ವನಜವ ತೋರಿ ಸನ್ಮೋದವನೀಯೆ3