ವಿಜಯವಿಠ್ಠಲ ವಿಜಯವಿಠ್ಠಲ
Category: ಶ್ರೀಕೃಷ್ಣ
Author: ವಿಜಯದಾಸ
ವಿಜಯವಿಠ್ಠಲ ವಿಜಯವಿಠ್ಠಲ
ವಿಜಯವಿಠ್ಠಲ ಶ್ರೀ ವಿಜಯವಿಠ್ಠಲ
ವನಚರ ನಗಧರ ಅವನಿಯ ಉದ್ಧಾರ
ಹನನ ಮಾಡಿದಿಯೊ ಕಾನನ ವೇಗದಿ ಭು-
ವನ ದಾನದ ನೆವನನು ಮಾಡಿ ಗಂಗೆಯ ಹ -
ವಣದಿ ಪಡದೋ ಶ್ರೀ ವಿಜಯವಿಠ್ಠಲಾ ||1||
ಛಲದಿಂದ ಕುಲ ಕೋಲಾಹಲ ಮಾಡಿಸಿ ನೀ ತರಿದೆ
ಬಾಲೆಯರ ಬಾಲರ ಬಿಡದೆ
ಸುಲಭದಿ ಕರ್ಣಗೆ ಒಲಿದು ಪೇಳಿದೆ ಆ
ಸುಲಲಿತಾ ಭಾರ್ಗವ ವಿಜಯವಿಠ್ಠಲ||2||
ಶತಮಖರಿಪು ಲೋಕಪಿತನೊರವಿನಿಂದಲಿ
ಖತಿ ಸಕಲರಿಗೆ ನೀವು ತರಿದಿರಲು
ಪತಿತಪಾವನ ರಾಮ ಅತಿ ವೇಗ ದನುಜನ
ಹತವ ಮಾಡಿದೆಯೊ ಶ್ರೀ ವಿಜಯವಿಠ್ಠಲ||3||
ಬಕಮುಖ ದನುಜರ ಹಕ್ಕಲಗೊಳಿಸಿ ಬಲು
ಯುಕುತಿಯಿಂದಲಿ ಭಕುತರ ಪೊರದೆ
ವಿಕಸಿತ ಕಮಲನಯನ ಕಂಜನಾಭನೆ
ಸಕಲ ಸುರರ ಪಾಲ ವಿಜಯವಿಠ್ಠಲಾ ||4||
ರಕ್ಕಸ ಮರ್ದನ ದಿಕ್ಕು ಮೋಹಿಪ ಕೃಷ್ಣ
ರುಕ್ಮಿಣಿ ಪತಿಯಾದಾ ಚಕ್ರಪಾಣಿ
ಉಕ್ಕಿದ ಮಗಧನ ಸೊಕ್ಕು ಮುರಿದು ಕಪಿ
ರೆಕ್ಕ ಆಳ್ವನಿಗೆ ಒಲಿದೆ ವಿಜಯವಿಠ್ಠಲಾ ||5||
ರಣದೊಳರ್ಜುನ ಬಾಣ ಧನು ಕೆಳಗಿಡಲಾಗಿ
ಘನವಾದ ವಿಶ್ವರೂಪವ ತೋರಿದೆ
ದಿನಮಣಿ ಕೋಟಿ ಅಧಿಕ ಕಾಂತಿ ನರಹರಿ
ವನಜ ಸಂಭವನಯ್ಯ ವಿಜಯವಿಠ್ಠಲಾ ||6||
ವನಿತೆಯರ ವ್ರತ ಭಂಗವ ಮಾಡಿ
ದಾನವರ ಮೋಹಿಸಿದೆಯೊ ಪವನನೊಡಿಯಾ
ಉನುಮತ ಜನ ಕುಲ ಸನುಮತ ಶಾಸ್ತ್ರವ ವ-
ದನದಲಿ ಮೆದ್ದಿಯೊ ವಿಜಯವಿಠ್ಠಲಾ ||7||
ರಜೋತಮ ಗುಣವನು ಭುಂಜಿಸುತ
ಕುಜನರ ವ್ರಜ ಭೂಮಿ ನಿಜವಾಗಿ ವ್ಯಾಪಿಸಿರೆ
ಸುಜನಪಾಲ ನೀನು ವದಗಿ ವಾಜಿಯನೇರಿ
ಭಜನಗೈಸಿದ ವೇಗ ವಿಜಯವಿಠ್ಠಲಾ ||8||
ಗೋಕುಲದಲಿ ಅನೇಕ ಲೀಲೆಯ ತೋರಿ
ಬೇಕಾದ ವರ ಪುಂಡರೀಕಗಿತ್ತೆ
ಸಾಕಾರ ಗುಣ ಪೂರ್ಣ ವೇಣುಗೋಪಾಲ ವಿ
ವೇಕವ ಕೊಟ್ಟ ಕಾಯನ್ನ ವಿಜಯವಿಠ್ಠಲಾ||9||