ವೆಂಕಟೇಶ ಮಂತ್ರ ಒಂದೇ
Category: ಶ್ರೀಕೃಷ್ಣ
Author: ವಿಜಯದಾಸ
ವೆಂಕಟೇಶ ಮಂತ್ರ ಒಂದೇ
ಸಂಕಟ ಪರಿಹರಿಸಿ ಸಂಪದವಿಯ ಕೊಡುವ
ಬಲನ ಭೂಸುರಹತ ಪೋಗಾಡಿದ ಮಂತ್ರ |
ಬಲಿಯ ಕನಕ ಸ್ತೇಯ ಕಳದ ಮಂತ್ರಾ ||
ಬಲವಂತ ವೃಷಭನ್ನ ಸಂಹರಿಸಿದ ಮಂತ್ರಾ |
ಕಲಿಯುಗದೊಳಗಿದೆ ಸಿದ್ಧ ಮಂತ್ರಾ ||1||
ವೃದ್ಧ ಬ್ರಾಹ್ಮಣಗೆ ಪ್ರಾಯವನು ಕೊಟ್ಟ ಮಂತ್ರಾ |
ಶುದ್ಧನ್ನ ಪರಿಶುದ್ದ ಮಾಳ್ಪ ಮಂತ್ರಾ |
ಉದ್ಧರಿಸಿ ಕಾವ್ಯನ್ಯೊಂಚಿ ? ಮಾಡಿದ ಮಂತ್ರಾ |
ಶ್ರದ್ಧೆಯನು ಪಾಲಿಸುವ ಸುಲಭ ಮಂತ್ರಾ||2||
ಗುರು ತಲ್ಪಕನ ದೋಷ ನಾಶನ ಮಾಡಿದ ಮಂತ್ರಾ |
ಹರನ ಸುತ ಬರಲವನ ಪೊರೆದ ಮಂತ್ರಾ |
ಸ್ಮರಿಸಲಾಕ್ಷಣ ಒಮ್ಮೆ ಮುಂದೆ ನಿಲುವ ಮಂತ್ರಾ |
ಅರಸರಿಗೆ ವಲಿದಿಪ್ಪ ಆದಿ ಮಂತ್ರಾ ||3||
ಅಜ ಭವಾದಿಗಳಿಗೆ ಪಟ್ಟಗಟ್ಟಿದ ಮಂತ್ರಾ |
ಗಜ ಮೊದಲಾದವರ ಕಾಯ್ದ ಮಂತ್ರಾ |
ರಜ ದೂರವಾಗಿದ್ದ ರಮ್ಯವಾದ ಮಂತ್ರಾ |
ಕುಜನ ಕುಲವನಕೆ ಕುಠಾರ ಮಂತ್ರಾ ||4||
ಪ್ರಣವ ಪೂರ್ವಕದಿಂದ ಜಪಿಸಲು ವೊಲಿವ ಮಂತ್ರಾ |
ಅಣು ಮಹದಲೀ ಪರಿಪೂರ್ಣ ಮಂತ್ರಾ |
ಫಣಿಶೈಲ ನಿಲಯ ಸಿರಿ ವಿಜಯವಿಠ್ಠಲನ ಮಂತ್ರಾ |
ಕ್ಷಣ ಕ್ಷಣಕೆ ಬಲ್ಲವರಿಗೆ ಪ್ರಾಣ ಮಂತ್ರಾ ||5||