ವ್ಯಾಪಾರ ಉದ್ಯೋಗವನು ಮಾಡುವೆ
Category: ಶ್ರೀಕೃಷ್ಣ
Author: ವಿಜಯದಾಸ
ವ್ಯಾಪಾರ ಉದ್ಯೋಗವನು ಮಾಡುವೆ |
ಭೂಪಾಶದೊಳಗೆ ಎಲ್ಲರಿಗೆ ಬಲ್ಲಿದನಾಗಿ
ಮುರಾರಿ ನಾಮವೆಂಬೊ ಮುಂಡಾಸವನೆ ಸುತ್ತಿ |
ಅರವಿಂದನಾಭವೆಂಬೊ ಅಂಗಿಯ ತೊಟ್ಟು ||
ನರಹರಿನಾಮವೆಂಬೊ ನಡುಕಟ್ಟನೆ ಸುತ್ತಿ |
ಕರುಣಾಸಾಗರನೆಂಬೊ ಕಠಾರಿಯನು ಸಿಕ್ಕಿಸಿ ||1||
ಕಮಲನಾಭವೆಂಬೊ ಕಮಲದಾನಿ ಪಿಡಿದು |
ತಿಮಿರದೋಷವೆಂಬೊ ಪಾಯಿಪೋಸು ಮೆಟ್ಟಿ ||
ಶಮೆದಮೆಯೆಂಬೊ ಪರಿಚಾರಕರ ಒಡಗೊಂಡು
ಗಮಿಸಿದ್ದೆನೊ ಹರಿದಾಸರಿದ್ದ ಚಾವಡಿಗೆ ||2||
ಪೋಗಿ ನಮಸ್ಕಾರವೆಂದು ತಲೆಬಾಗಿ ನಿಲ್ಲಲು |
ಭಾಗವತರು ಕರೆದು ಇಂಬನಿತ್ತು ||
ಯೋಗಕ್ಷೇಮವೆಲ್ಲ ವಿಚಾರಿಸಿ ಪ್ರೀತಿಯಲಿ |
ಈಗಳೆ ಕುಳಿತ ಅಚ್ಯುತನ ತೋರಿದರು ||3||
ಕಂಡು ಕರವನು ಮುಗಿಯೆ ಕರುಣಾಸಾಗರನೆಂಬೊ |
ಮಂಡಲಾಧಿಪನು ಕರೆದು ಮನ್ನಿಸಿ ||
ಗಂಡುಗಲಿಯಾಗೆಂದು ಸಂಚುಗಾರಿಕೆ ತುಲಸಿ |
ದಂಡೆ ಕೊರಳಿಗೆ ಹಾಕಿ ದಾಸರೊಳಗಿರಿಸಿದನು ||4||
ಘನವಾದ ಉದ್ಯೋಗ ದೊರಕಿತು ನನಗಿನ್ನು |
ಅನುಮಾನವಿಲ್ಲವು ಎಂದೆಂದಿಗೂ ||
ದಿನದಿನಕೆ ಹರಿನಾಮವೆಂಬೊ ಲೆಖ್ಖ-|
ವನು ಬರೆದು ತ್ರಿಲೋಕದರಸನಿಗೆ ಒಪ್ಪಿಸಿದೆ ||5||
ಬರೆದು ಲೆಖ್ಖವ ನೋಡಿ ದಯಾಪಯೋವಾರಿಧಿ |
ಹರುಷದಿಂದಲಿ ಎನಗೆ ಸಂಬಳಕ್ಕೆ ||
ಬರೆಸಿ ಕೊಟ್ಟನು ಸನದು ಕೇಶವಾದಿಯಂಬೊ |
ವರಹಗಳು ಎಂದಿಗಾದರು ಅಳಿವಿಲ್ಲದೆ ||6||
ಈಸು ದಿನ ಉದ್ಯೋಗ ಹೀನನಾಗಿ ನೊಂದೆ |
ದಾಸರಾ ದಯದಿಂದ ದೊರೆಕಿತಿಂದು ||
ಏಸು ಜನ್ಮದ ಸಂಚಿತ ಕರ್ಮ ಓಡಿಸಿ |
ಶ್ರೀಶ ವಿಜಯವಿಠ್ಠಲನಲ್ಲಿ ಬಾಳಿದೆನೊ ||7||