ಶ್ರೀಪತಿಯ ನೈವೇದ್ಯ ಕೊಡುವದು
Category: ಶ್ರೀಕೃಷ್ಣ
Author: ವಿಜಯದಾಸ
ಶ್ರೀಪತಿಯ ನೈವೇದ್ಯ ಕೊಡುವದು
ಧೂಪದಾಂತರ ಭೂಮಿಶೋಧನ
ಆಪದಿಂ ಮಂಡಲವ ಮಾಡುತ ರಂಗವಲಿ ಹಾಕಿ
ಸೂಪ ಅನ್ನವು ಅಗ್ನಿಕೋಣದಿ
ಆ ಪರಮ ಅನ್ನವನು ಈಶಾ
ನ್ಯಾಪೆಯಾಲೇಹಗಳ ನೈರುತದಲಿ ಇಟ್ಟು ತಥಾ ||1||
ವಾಯುದಿಶದಲಿ ಉಪಸುಭೋಜ್ಯವು
ವಾಯಸಾನ್ನದ ಮಧ್ಯ ಘೃತಸಂ
ಸ್ತೂಯಮಾನ ನಿವೇದನವು ಈ ಕ್ರಮದಿ ಹೀಂಗಿಟ್ಟು
ಬಾಯಿಯಿಂದಲಿ ದ್ವಾದಶ ಸ್ತುತಿ
ಗಾಯನದಿ ನುಡಿಯುತಲಿ ಈ ಕಡೆ
ಆಯಾ ಅಭಿಮಾನಿಗಳು ದೇವತೆಗಳನು ಚಿಂತಿಸುತ ||2||
ಓದನಕ ಅಭಿಮಾನಿ ಶಶಿಪರ
ಮೋದನಕ ಅಭಿಮಾನಿ ಭಾರತಿ
ಆದಿವಾಕರ ಭಕ್ಷ ಕ್ಷೀರಾಬ್ಧೀಜೆ ಸರ್ಪಿಯಲಿ
ಸ್ವಾದುಕ್ಷೀರಕ ವಾಣಿ ಮಂಡಿಗಿ
ಲೀ ದ್ರುಹಿಣನವನೀತ ಪವನಾ
ದಾದಧಿಗೆ ಶಶಿವರುಣ ಸೂಪಕೆ ಗರುಡ ಅಭಿಮಾನಿ||3||
ಶಾಕದಲಿ ಶೇಷಾಮ್ಲ ಗಿರಿಜಾ
ನೇಕನಾಮ್ಲದಿ ರುದ್ರಸಿತದಲಿ
ಪಾಕಶಾಸನ ಶೇಷುಪಸ್ಕರದಲ್ಲಿ ವಾಕ್ಪತಿಯೂ
ಈ ಕಟು ಪದಾರ್ಥದಲಿ ಯಮ ಬಾ
ಹ್ಲೀಕ ತಂತುಭದಲ್ಲಿ ಮನ್ಮಥ
ನೇಕ ವ್ಯಂಜನ ತೈಲ ಪಕ್ವದಿ ಸೌಮ್ಯನಾಮಕನೂ ||4||
ಕೂಷುಮಾಂಡದ ಸಂಡಿಗಿಲಿ ಕುಲ
ಮಾಷದಲಿ ದಕ್ಷ ಪ್ರಜಾಪತಿ
ಮಾಷ ಭಕ್ಷದಿ ಬ್ರಹ್ಮಪುತ್ರನು ಲವಣದಲಿ ನಿಋತಿ
ಈ ಸುಫಲ ಷಡ್ರಸದಿ ಪ್ರಾಣ ವಿ
ಶೇಷ ತಾಂಬೂಲದಲಿ ಗಂಗಾ
ಆ ಸುಕರ್ಮಕೆ ಪುಷ್ಕರನು ಅಭಿಮಾನಿ ದೇವತೆಯೂ ||5||
ಸಕಲ ಭಕ್ಷ್ಯಗಳಲ್ಲಿ ಉದಕದಿ
ಭುಕು ಪದಾರ್ಥಕೆ ವಿಶ್ವ ಮೂರುತಿ
ಮುಖದಲೀ ನುಡಿ ಅಂತಿಲೀ ಶ್ರೀ ಕೃಷ್ಣ ಮೂರುತಿಯ
ನಖ ಚತು ಪದಾರ್ಥದಲಿ ಆ ಸ
ಮ್ಯಕು ಚತುರವಿಂಶತಿ ಅಭಿಮಾ
ನಿಕರ ಚಿಂತಿಸಿ ಸರ್ಪಿ ಸಹ ಶ್ರೀ ತುಳಸಿಯನು ಹಾಕಿ||6||
ಕ್ಷೀರ ದಧಿ ಕರ್ಪೂರ ಸಾಕ
ರ್ಜೀರ ಪನಸ ಕಪಿಥ್ಥ ಪಣ್ಕದ
ಳೀರಸಾಲ ದ್ರಾಕ್ಷ ತಾಂಬೂಲದಲಿ ಚಿಂತನೆಯೂ
ಪೂರ ಶಂಖದಿ ಉದಕ ಓಂ ನಮೊ
ನಾರೆಯಣಾ ಅಪ್ಟಾಕ್ಷರವು ತನ
ಮೋರೆ ಮುಚ್ಚಿ ಶತಾಷ್ಟವರ್ತಿಲಿ ಮಂತರಿಸಿ ತೆರೆದೂ||7||
ಸೌರಭೀ ಮಂತ್ರದಲಿ ಪ್ರೇಕ್ಷಿಸಿ
ತೋರಿ ತೀವ್ರದಿ ಮುದ್ರಿ ನಿರ್ವಿಷ
ಮೂರೆರಡು ಮೊದಲಾಗಿ ಶಂಖವು ಅಂತಿಮಾಡಿ ತಥಾ
ಪೂರ್ವ ಆಪೋಶನವು ಹೇಳಿ ಅ
ಪೂರ್ವ ನೈವೇದ್ಯವು ಸಮರ್ಪಿಸಿ
ಸಾರ್ವಭೌಮಗ ಉತ್ತರಾಪೋಶನವು ಹೇಳಿ ತಥಾ ||8||
ಪೂಗ ಅರ್ಪಿಸಿದಂತರದಿ ಅತಿ
ಬ್ಯಾಗದಲಿ ಲಕ್ಷ್ಯಾದಿ ನೈವೇ
ದ್ಯಾಗ ಅರ್ಪಿಸಿ ತಾರತಮ್ಯದಿ ಉಳಿದ ದೇವರಿಗೆ
ಸಾಗಿಸೀ ಶ್ರೀ ಹರಿಯ ಸಂಪುಟ
ದಾಗ ನಿಲ್ಲಿಸಿ ವೈಶ್ವದೇವವು
ಸಾಗಿಸೀ ಶ್ರೀ ವಿಜಯವಿಠಲನ ಧೇನಿಸುತ ಮುದದಿ||9||