ಸತ್ಯವತಿಸೂನು ವೇದವ್ಯಾಸ ಲಕುಮಿಶಾ

Category: ಶ್ರೀಗುರು

Author: ವಿಜಯದಾಸ

ಸತ್ಯವತಿಸೂನು ವೇದವ್ಯಾಸ ಲಕುಮಿಶಾ |
ನಿತ್ಯ ನಿನ್ನ ನೆನೆಸುವ ಭೃತ್ಯರೊಡನೆ ಪೊಂದಿಸು ದೇವ

ಮೊದಲು ಸರ್ಪ ವಾಸುಕಿ ಇಲ್ಲಿ ಮದನಾರಿಯ ವಲಿಸಿ | ತನ್ನ
ಬದುಕುವಗೋಸುಗ ಉಪಾಯದಲಿ ನಿಂದರೆ |
ಅದರ ತರುವಾಯ ಸ್ಕಂದ ತ್ರಿದಶ ವೈರಿ ತಾರಕನ್ನ ಸದೆದು |
ಇಂದ್ರಾದ್ಯರ ಕೂಡ ಮುದದಿಂದ ಸ್ಥಿರವಾಗಿ ಮೆರೆದ ||1||

ಷಣ್ಮೊಗನು ಸತತ ತಾನು ಅನ್ನದಾನ ಮಾಡುತ ಹಾ |
ವನ್ನನಾಗುದಕ್ಕೆ ಪ್ರಸನ್ನ ಮೋದದಲಿ |
ನಿನ್ನ ಪೊಲಿಸಿಲ್ಲಿಗೆ ಬಾಹಾ | ದೆನ್ನ ಭಕುತಿಗೆ ಮೆಚ್ಚಿ |
ಮುನ್ನಿನಾಗಮವನ್ನೆ ಹೇಳಿದ ವಾಸುದೇವ ||2||

ಕಲಿಯುಗದೊಳಗೆ ವಿಪ್ರಕುಲದಲಿ ಮಾರುತಿ ಎನಿಸಿ |
ಬಲು ಮಾಯಿಗಳ ಮೋಹನ ಶಾಸ್ತ್ರವಳಿದು ಬದರಿಯ |
ಬಳಿಗೆ ಬಂದು ಶಿಲಾಪ್ರತಿಮೆಗಳನೆ ಪಡೆದು ತಂದು |
ಇಲ್ಲಿ ನೆಲೆ ಮಾಡುವ ಸುಜನರಿಗೆ
ಪೊಳೆವಂದದಲಿ ಇಳೆಯೊಳಗೆನಲು ||3||

ಅಂದಿನಾರಭ್ಯ ಪಾರ್ವತಿನಂದನ ಕುಕ್ಕೆಪುರದಲ್ಲಿ |
ನಿಂದು ಸರ್ವರಿಂದ ಪೂಜೆ ಚಂದದಿ ಕೊಳುತಾ |
ಮಂದ ಕುಷ್ಟರೋಗಗಳ ಹಿಂದುಮಾಡಿ ಓಡಿಸಿ | ಗೋ
ವಿಂದ ನಿನ್ನ ಪಾದ ಧ್ಯಾನದಿಂದ ಲೋಲಾಡುತಲಿರೆ ||4||

ಮರುತದೇವ ಸಂಪುಟಾಕಾರವಾದ ನೀನದರೊಳು |
ಚಾರು ಸಿಲೆ ರೂಪವಾದ ಪಾರಾಶರ ಋಷಿ |
ಧಾರುಣಿಗೆ ರಹಸ್ಯವ ತೋರಿಕೊಳುತಲಿ |
ಕುಮಾರಧಾರಿವಾಸವಾದ ಕು | ಮಾರ ಗೊಲಿದ ವಿಜಯವಿಠ್ಠಲಾ ||5||