ಆಚಾರವಿಲ್ಲದ ನಾಲಿಗೆ

Category: ಶ್ರೀಕೃಷ್ಣ

Author: ಪುರಂದರದಾಸ

ಆಚಾರವಿಲ್ಲದ ನಾಲಿಗೆ | ನಿನ್ನ
ನೀಚ ಬುದ್ದಿಯ ಬಿಡು ನಾಲಿಗೆ |
ವಿಚಾರವಿಲ್ಲದೆ ಪರರ ದೂಷಿಪುದಕೆ
ಚಾಚಿಕೊಂಡಿರುವಂಥ ನಾಲಿಗೆ ||

ಪ್ರಾತಃಕಾಲದೊಳೆದ್ದು ನಾಲಿಗೆ | ಸಿರಿ -
ಪತಿಯೆನ್ನಬಾರದೆ ನಾಲಿಗೆ |
ಪತಿತಪಾವನ ನಮ್ಮ ರತಿಪತಿಜನಕನ
ಸತತವು ನುಡಿ ಕಂಡ್ಯ ನಾಲಿಗೆ ||

ಚಾಡಿ ಹೇಳಲಿಬೇಡ ನಾಲಿಗೆ | ನಿನ್ನ
ಬೇಡಿಕೊಂಬೆನು ಕಂಡ್ಯ ನಾಲಿಗೆ |
ರೂಢಿಗೊಡೆಯ ಶ್ರೀರಾಮನ ಪಾದವ
ಪಾಡುತಲಿರು ಕಂಡ್ಯ ನಾಲಿಗೆ ||

ಹರಿಯನ್ನೆ ಸ್ಮರಿಸಯ್ಯ ನಾಲಿಗೆ | ನರ -
ಹರಿಯನ್ನೆ ಭಜಿಸಯ್ಯ ನಾಲಿಗೆ |
ವರದ ಪುರಂದರವಿಟ್ಠಲರಾಯನ
ಚರಣವ ಸ್ತುತಿಸಯ್ಯ ನಾಲಿಗೆ ||