ಸಾಗಿ ಬಾರೈಯ ನೀನು
Category: ಶ್ರೀಕೃಷ್ಣ
Author: ವಿಜಯದಾಸ
ಸಾಗಿ ಬಾರೈಯ ನೀನು, ಗೋವಿಂದ ವೆಂಕಟ
ಸಾಗಿಬಾರೈಯ ಭವರೋಗದ ವೈದ್ಯನೆ
ಬಾಗಿ ನಿನಗೆ ಚೆನ್ನಾಗಿ ತುತಿಪೆ ನಿಂದು
ಭಾಗೀರಥಿಪಿತ ಭಾಗವತರ ಸಂ
ಯೋಗರಂಗ ಉರಗಗಿರಿ ವೆಂಕಟ
ರಥದ ಮಧ್ಯದಲಿಪ್ಪನೆ ರಥಾಂಡಜ ವಾಹನನೆ
ರಥಾಂಗಪಾಣಿಯೆ ದಶರಥ ನೃಪಬಾಲ
ಪಾರ್ಥಗೆ ಒಲಿದವನ ರಥವ ನಡಿಸಿ ಅತಿ-
ರಥ ಮಹರಥರ ವಿರಥರ ಮಾಡಿ ಗೆಲಿಸಿದೆ
ಪ್ರಥಮ ದೈವವೆ ಮನ್ಮಥಪಿತ ದೈತ್ಯರ-
ಮಥನ ಭಕ್ತರ ಮನೋರಥನೆ ತಾರಾ-
ಪಥವರ್ಣನೆ ತವ ಕಥಾಶ್ರವಣದಲಿ ಸು-
ಪಥವನು ತೋರಿಸು ಪ್ರಥಮಾಂಗದೊಡೆಯ ||1||
ನಿಲ್ಲದೆ ಬರುವುದು ಪುಲ್ಲಲೋಚನೆ ಸಿರಿ-
ವಲ್ಲಭ ಸರ್ವರಿಗು ಬಲ್ಲಿದನೆ ಅಪ್ರತಿ-
ಮಲ್ಲ ಮುರವಿರೋಧಿ ಮೆಲ್ಲಮೆಲ್ಲನೆ ಪಾದ
ಪಲ್ಲವ ತೋರುತ್ತ ಎಲ್ಲಾ ಕಾಲದಿ ನಮ್ಮ-
ನೆಲ್ಲರುದ್ಧರಿಪುದು ಎಲ್ಲಿ ನಿನಗೆ ಸರಿ-
ಯಿಲ್ಲವೊ ನೋಡಲು ಸಲ್ಲುವುದೋ ಬಿರು-
ದಲ್ಲಿಗಲ್ಲಿಗೆ ಗುಣಬಲ್ಲವರಾರಿನ್ನು
ನೆಲ್ಲಕಟ್ಟು ಕೊನೆಯಲ್ಲಿಪ್ಪ ವಿಶ್ವ ||2||
ಬೊಮ್ಮ ಮೊದಲು ಮನುಜೋತ್ತಮರು ಕಡೆಯಾಗಿ
ನಿಮ್ಮ ದಾಸರು ಅವರ ಸಮ್ಮಂಧಿಗಳ ಪಾದ-
ನೆಮ್ಮಿಕೊಂಡಿಪ್ಪಂಥ ಧಮ್ಮನು ನಾ ಸರ್ವೋ-
ತ್ತುಮ್ಮಾನೇಕ ಗುಣಮಹಿಮ ವಿಭೂಷಿತ
ರಮ್ಮೆಧರಣಿದೇವಿ ಇಮ್ಮಹಿಷೇರ ಕೂಡಿ
ಸಮುಖನಾಗುತ ಸುಮ್ಮನೆ ಬಾ ಬಾ
ಹಿಮ್ಮೆಟ್ಟಿದೆ ಸಿರಿ ವಿಜಯವಿಠ್ಠಲ ಅನು-
ಪಮ್ಮಚರಿತ ಪರಬೊಮ್ಮ ತಿರುಮಲೇಶ ||3||