ಹರಿ ಎಂಬ ನಾಮ ಎರಡಕ್ಷರವ
Category: ಶ್ರೀಕೃಷ್ಣ
Author: ವಿಜಯದಾಸ
ಹರಿ ಎಂಬ ನಾಮ ಎರಡಕ್ಷರವ
ಸ್ಮರಿಸುವಾಲೋಚನಿಗೆ ದುರಿತ ಕಾನನ ಛೇದ
ವೇದರಾಶೀ ಎಂಬ ಭೂಸುರನು ಯಮಪುರದ
ಹಾದಿಯಲಿ ಪೋಗುತಿರೆ ಎಡಬಲದಲಿ
ಬಾಧೆ ಬಡುವ ಪಾಪಿ ಜೀವರಾಶಿಯ ನೋಡಿ
ಮಾಧವಾ ಹರಿ ಎನಲು ಮುಕ್ತರಾದರು ಎಲ್ಲಾ ||1||
ಮತ್ತೆ ಪುಷ್ಕರನೆಂಬ ಹರಿಭಕ್ತ ಬರಲಾಗಿ
ಮೃತ್ಯು ನಡುಗೀ ನಿಂದು ಪೂಜೆ ಮಾಡೀ
ಉತ್ತಮಗೆ ಅಲ್ಲಿದ್ದ ನರಕಗಳು ತೋರಿಸೆ
ಬತ್ತಿ ಪೋದವು ಹರಿ ಎಂಬ ಶಬ್ದವ ಕೇಳಿ ||2||
ಕೀರ್ತಿ ಮಾನವನೆಂಬೊ ಭೂಪಾಲ ಯಮಪುರದ
ಆರ್ತಿಯನು ಕಳೆದ ಶ್ರೀಹರಿಯ ವೊಲಿಸೀ
ವಾರ್ತಿಯನು ಕೇಳಿ ಅಂತಕ ಬಂದು ಕಾದೆ ಸ
ಮರ್ಥನಾಗದೆ ಪೋದ ಏನೆಂಬೆ ಜಗದೊಳಗೆ||3||
ಹದಿನಾರು ಸಾವಿರ ತರುಣಿಯರು ಅಸುರನ್ನ
ಸದನದಲಿ ಸೆರೆಬಿದ್ದು ಹರಿಯ ತುತಿಸೇ
ಮುದದಿಂದ ಹರಿಪೋಗಿ ಖಳನ ಕೊಂದು ಆ
ಸುದತಿಯರಿಗೆ ತನ್ನ ಅಂಗಸಂಗವನಿತ್ತ||4||
ಕಂಡವರ ಮನೆ ಉಂಡು ಚಾಂಡಾಲರ ಕೂಡ
ಮಂಡಲದೊಳಗೆ ಪಾತಕನಾದರೂ
ಗಂಡುಗಲಿ ವಿಜಯವಿಠ್ಠಲ ಹರೆ ಹರೇ ಎಂದುಕೊಂಡಾಡಿದರೆ
ಮುಕುತಿ ಸುರರಿಗಿಂತಲೂ ವೇಗ||5||