ಹರಿ ಮಾಡ್ದ ಮರ್ಯಾದೆ
Category: ಶ್ರೀಕೃಷ್ಣ
Author: ವಿಜಯದಾಸ
ಹರಿ ಮಾಡ್ದ ಮರ್ಯಾದೆ ಅನುಭವಿಸಲೀ ಬೇಕು
ಸರಸಿಜಭವಾದ್ಯರಿಗೆ ಬಿಡದು
ವರಕಲ್ಪ ಕಲ್ಪದಲಿ ಮೀರಿದವರುಂಟೆ ನಿಂ
ದಿರದಾವ ಜನುಮವಾಗೆ ಪ್ರಾಣಿ
ವಾರಿಜಭವನ ನೋಡು ಮುನಿಶಾಪದಿಂ
ಧಾರುಣಿಯೊಳು ಪೂಜೆ ತೊರೆದ
ಪ್ರಾರಬ್ಧ ನಿರ್ದೋಷಿಗಾದರೂ ತಪ್ಪದವ-
ತಾರವಿಲ್ಲದವನಾದನೋ ಪ್ರಾಣಿ||1||
ಜಗಕೆ ಗುರುವೆಂದೆನಿಸಿಕೊಂಡ ಪ್ರಾಣನ ನೋಡು
ಯುಗದೊಳಗೆ ಕೋತ್ಯಾದನಲ್ಲೋ
ಮಗುಳೆ ಮಾತನು ಕೇಳು ಕಚ್ಚುಟವ ಧರಿಸಿದ
ಅಗಣಿತ ಸತ್ವನಿಗೆ ಈ ಪರಿಯೆ ಪ್ರಾಣಿ ||2||
ಶಿವನ ನೋಡೋ ಮರುಳೆ ದೂರ್ವಾಸ ಮುನಿಯಾಗಿ
ಅವನಿಪತಿ ಮೊರೆ ಹೊಕ್ಕನಲ್ಲೊ
ಭುವನದೊಳಗೆಂದೆಂದು ವ್ರಣದಿಂದ ದುರ್ಗಂಧ
ಸ್ರವಿಸುವುದು ಶಿರಸಿನಲ್ಲೀ ಪ್ರಾಣಿ ||3||
ಇಂದ್ರ ತರ್ಕವನೋದಿ ನರಿಯಾದ ಪರಸತಿ-
ಯಿಂದ ಮೇಷ ವೃಷಣನಾಭ
ಕಂದರ್ಪ ಶರೀರದಿಂದ ನಾಶನನಾಗಿ
ಬಂದ ಮೀನಿನ ಗರ್ಭದಿಂದ ಪ್ರಾಣಿ||4||
ಸೂರ್ಯ ಚಂದ್ರರ ನೋಡು ಮೂಲ ರೂಪದಿ ಪರ
ಭಾರ್ಯರಿಗೆ ಶಿಲುಕಿ ತಮ್ಮಾ
ವೀರ್ಯವನು ಕಳಕೊಂಡು ಬರಿದಾದರೋ ಕರ್ಮ-
ಕಾರ್ಯ ವಾರಿಗು ಬಿಡದೆಲೋ ಪ್ರಾಣಿ ||5||
ಪಾವಕನು ಸರ್ವಭಕ್ಷಕನಾದ ಮಿಕ್ಕಾದ
ಅವಾವ ಸುರರ ಕರ್ಮಂಗಳ
ಯಾವತ್ತು ವರ್ಣಿಸಲಳವಲ್ಲ ಎಚ್ಚತ್ತು
ಪಾವನ್ನ ನೀನಾಗೆಲೋ ಪ್ರಾಣಿ ||6||
ಆವಾವ ಸ್ಥಳದಲ್ಲಿ ಜನನ ಸ್ಥಿತಿಗತಿ ಮತ್ತೆ
ಸಾವು ಸಾಕಲ್ಯದಿ ಮರೆಯದಲೆ
ದೇವದೇವನು ಕ್ಲುಪ್ತ ಮಾಡಿಪ್ಪನೋ ಅದನು
ಆವನಾದರು ಮೀರಲೊಳವೇ ಪ್ರಾಣಿ ||7||
ಉಣಬೇಕು ಉಣಬೇಕು ಮತ್ತೆ ಉಣಲೀಬೇಕು
ತ್ರಿ-ಗುಣ ಕಾರ್ಯರ ಭವಣೆ ಮನುಜ
ತೃಣ ಜನ್ಮ ಬಂದ ಕಾಲಕ್ಕು ತ್ರೈತಾಪಗಳು
ಅಣುಮಾತ್ರವೂ ತಪ್ಪವೋ ಪ್ರಾಣಿ ||8||
ಧೀರನಾಗಲಿ ಮಹಾಶೂರನಾಗಲಿ ಮತ್ತೆ
ಧಾರುಣೀಪತಿ ಭಾಗ್ಯನಾಗೆ
ಆರಿಗಾದರು ಬಿಡದು ಪರೀಕ್ಷಿತರಾಯನು
ನೀರೊಳಗಿದ್ದ ತಿಳಿಯೋ ಪ್ರಾಣಿ ||9||
ಜಲಗಿರಿವನ ಪೊದೆ ಹೊದರು ಗಹ್ವರ ಹುತ್ತ-
ಬಿಲ ಸಪ್ತದ್ವೀಪ ಪಾತಾಳದಿ
ಹಲವು ನಭ ಸ್ವರ್ಗಾದಿಲೋಕ ಜನನಿಯ ಜಠರ-
ದೊಳಗಿರೆ ತಪ್ಪುವುದೆ ಬರಹಾ ಪ್ರಾಣಿ ||10||
ಅಣಿಮಾದಿ ಅಷ್ಟಾಂಗ ಯೋಗ ಮಾಡಲು ಮಹಾ
ಗುಣವಂತ ಜನರು ಒಂದು
ಕ್ಷಣವ ಮೀರಲುಬಹುದೆ ಮೃತ್ಯು ಬಂದೆದುರಾಗಿ
ಸೆಣಸುತಿರೆ ಬೇರುಂಟೆ ಕಾರ್ಯ ಪ್ರಾಣಿ ||11||
ಎಲ್ಲೆಲ್ಲೆ ಅನ್ನ ಮತ್ತೆಲ್ಲೆಲ್ಲಿ ಉದಕ ಇ-
ನ್ನೆಲ್ಲೆಲ್ಲಿ ನಿದ್ರೆ ಜಾಗರಣಿಯೊ
ಎಲ್ಲೆಲ್ಲಿ ಹೆಜ್ಜೆಗಳನಿಡುವ ಪರಿಮಿತಿಯುಂಟೊ
ಅಲ್ಲಿಲ್ಲಿಗೊಯ್ಯುವುದೊ ಬಿಡದೆ ಪ್ರಾಣಿ ||12||
ಧಿಕ್ಕಾರ ಸತ್ಕಾರ ನಿಂದೆ ವಂದನೆಗಳು
ರೊಕ್ಕಾ ಸುಖ ದುಃಖ ಕಾರಣಗಳು
ಉಕ್ಕೇರಿದಂತೆ ಬರುತಿಹುದೊ ನಮ್ಮ ದೇ-
ವಕ್ಕಿ ಕಂದನ ಆಜ್ಞಯಿಂದ ಪ್ರಾಣಿ ||13||
ಕಾಶಿಯಲ್ಲಿರೆ ಮರಣ ಆವಲ್ಲಿ ಇಪ್ಪುದಾ-
ದೇಶಕ್ಕೆ ಒಯ್ಯುವುದು ಕಾಲ
ಕಾಶಿರಾಯನ ನೋಡು ಒಡನೆ ಅಪಮೃತ್ಯು ವೇದ-
ವ್ಯಾಸರಿದ್ದರು ತಪ್ಪಲಿಲ್ಲ ಪ್ರಾಣಿ ||14||
ಮಾರುತ ಭಾರತಿ ಶೇಷ ಶಿವ ಪಾರ್ವತಿ-
ಸರಸಿಜ ಬಾಂಧವಾಗ್ನಿ ಧರ್ಮ
ತರುವಾಯ ಕಾಲ ಮೃತ್ಯು ಕಾಲನ ದೂತರು
ಅರಸುತಿಪ್ಪರು ಲವ ತೃಟಿಯ ಪ್ರಾಣಿ ||15||
ಇವರಿವರಿಗುತ್ತಮರು ಇವರಿವರಗಧಮರು
ಇವರೆಲ್ಲರಿಗೆ ಶ್ರೀ ಭೂಮಿ ದುರ್ಗಾ
ಅವಳಿಗೆ ಶ್ರೀ ಹರಿಯು ತಾನೆ ನಿಯಾಮಕನು
ವಿವರದಲಿ ತಿಳಿ ತಾರತಮ್ಯ ಪ್ರಾಣಿ ||16||
ಲಕುಮಿ ಮೊದಲು ಮಾಡಿ ಇವರೆಲ್ಲರಿಗೆ ಲೇಶ
ಶಕುತಿಯಿಲ್ಲವೊ ಕಾಣೊ ಮರುಳೆ
ಅಕಟಕಟ ಗುಣಪೂರ್ಣ ಸರ್ವ ಸ್ವಾತಂತ್ರ ವ್ಯಾ-
ಪಕ ಸರ್ವಾಂತರ್ಯಾಮಿಯೆನ್ನೋ ಪ್ರಾಣಿ ||17||
ಗುರು ಪರಂಪರ ವಾಯು ಲಕುಮಿ ನಾರಾಯಣನ
ಕರುಣಾ ಕಟಾಕ್ಷವುಳ್ಳನಕ
ಸುರ ನರೋರಗ ಯಕ್ಷಲೋಕದಲ್ಲಿದ್ದವರು
ಬರಿದೆ ಕೂಗಿದರೇನು ಆಹುದೋ ಪ್ರಾಣಿ ||18||
ಆವಾವ ಕಾಲ ತಪ್ಪಿಸಿ ಕಾವ ಹರಿತಾನು
ಸಾವ ಕಾಲವ ಮಾತ್ರ ತಪ್ಪಿಸನೋ
ಕಾವ ಕೊಲ್ಲುವ ಸ್ವಾಮಿ ಕಾಲನಾಮಕ ಪುರುಷ
ಜೀವಿಗಳು ಮುಖ್ಯವಲ್ಲ ಕಾಣೋ ಪ್ರಾಣಿ ||19||
ಭಗವವಸ್ವತಂತ್ರವನು ತಿಳಿಯದೆ ಮರುಳಾಗಿ
ಜಗದೊಳಗೆ ಚರಿಸದಿರೊ ಮಾನವ
ಅಘ ದೂರನಾಗೊ ನಾನಾ ಬಗೆಯಿಂದಲ-
ನ್ಯಗರ ಚಿಂತೆಗಳಲ್ಲಿ ಬಿಟ್ಟು ಪ್ರಾಣಿ ||20||
ಹಲವು ಮಾತೇನಿನ್ನು ದಾಸಭಾವವ ವಹಿಸಿ
ಕಲಿಯುಗದೊಳಗೆ ಸಂಚರಿಸೆಲೊ
ಬಲವಂತ ವಿಜಯವಿಠ್ಠಲನ ಪಾದಾಂಬುಜವ
ನಿಲಿಸಿ ವಲಿಸಿಕೊ ಮನಸಿನಲ್ಲಿ ಪ್ರಾಣಿ ||21||