ಹರಿದಾಸನಾದರೆ ಹ್ಯಾಂಗಿರಲಿ ಬೇಕು

Category: ಶ್ರೀಕೃಷ್ಣ

Author: ವಿಜಯದಾಸ

ಹರಿದಾಸನಾದರೆ ಹ್ಯಾಂಗಿರಲಿ ಬೇಕು
ನರಲೋಕದ ಚಿಂತೆ ಬಿಟ್ಟುಕೊಡಬೇಕು

ಇಂದು ನಾಳಿಗೆಯೆಂಬ ಯೋಚನೆಯ ಬಿಡಬೇಕು
ಇಂದ್ರಿಯಗಳನ್ನೆಲ್ಲ ಗ್ರಹಿಸಬೇಕು
ಬಂದದೆಲ್ಲ ಬರಲಿ ಈಗಲೇ ಎನಬೇಕು
ಅಂದವರು ಎನಗೆ ಬಂಧುಗಳು ಎನಬೇಕು ||1||

ಸ್ನಾನವನು ಬಿಟ್ಟು ಹರಿಕಥೆಯ ಕೇಳಲಿ ಬೇಕು
ದಾನಕ್ಕೆ ಸಮ್ಮೊಗನಾಗಬೇಕು
ಮಾನಾಭಿಮಾನಕ್ಕೆ ಹರಿತಾನೆ ಎನಬೇಕು
ಏನಾದರಾಗಲಿ ಸುಖಬಡಲಿಬೇಕು ||2||

ಇರಳು ಹಗಲು ಹರಿಸ್ಮರಣೆ ಮಾಡಲಿ ಬೇಕು
ಪರಲೋಕದ ಗತಿ ಬಯಸಬೇಕು
ಗುರುಹಿರಿಯರಿಗೆ ವಂದನೆಯ ಮಾಡಲಿ ಬೇಕು
ದುರುಳರನ ಕಂಡರೆ ದೂರಾಗಬೇಕು ||3||

ತಾವರೆಮಣಿ ತುಲಸಿಸರವ ಧರಿಸಲಿಬೇಕು
ಭಾವಶುದ್ಧನಾಗಿ ತಿರುಗಬೇಕು
ಕೋವಿದರೆ ಸಂಗಡ ಕೂಡ್ಯಾಡುತಿರಬೇಕು
ಪಾವಕನಂತೆ ಇಂಪವ ಕಾಣಬೇಕು ||4||

ಅನ್ನಪಾನಾದಿಗಳಿಗವಸರ ಬೀಳದಿರಬೇಕು
ಕಣ್ಣಿದ್ದು ಕುರುಡನೆಂದೆನಿಸಬೇಕು
ಚೆನ್ನಾಗಿ ವಾಯುಮತದಲ್ಲಿ ನಿಂದಿರಬೇಕು
ತನ್ನೊಳಗೆ ತಾ ತಿಳಿದು ನಗುತಲಿರಬೇಕು ||5||

ಬಿಂಬ ಮೂರುತಿಯ ಹೃದಯದಲಿ ನಿಲಿಸಲಿ ಬೇಕು
ಡಂಭಕ ಭಕುತಿಯ ಜರಿಯ ಬೇಕು
ಡಿಂಬುವನು ದಂಡಿಸಿ ವ್ರತವ ಚರಿಸಲಿ ಬೇಕು
ನಂಬಿ ನರಹರಿಪಾದವೆನುತ ಸಾರಲಿ ಬೇಕು||6||

ಹರಿಯಿಲ್ಲದನ್ಯತ್ರ ದೈವವಿಲ್ಲೆನ ಬೇಕು
ಮರುತನೆ ಜಗಕೆ ಗುರುವೆನಲಿ ಬೇಕು
ಪುರಂದರದಾಸರೇ ದಾಸರೆಂದನ ಬೇಕು
ಸಿರಿ ವಿಜಯವಿಠ್ಠಲನ ಸ್ಮರಣೆ ಮಾಡಲಿ ಬೇಕು ||7||