ಹರಿಯೆ ಸ್ವತಂತ್ರ ಚತುರದಶ ಭುವನಕೆ

Category: ಶ್ರೀಕೃಷ್ಣ

Author: ವಿಜಯದಾಸ

ಹರಿಯೆ ಸ್ವತಂತ್ರ ಚತುರದಶ ಭುವನಕೆ |
ಪರಮೇಷ್ಠಿ ಶಿವಾದ್ಯರಾತಗೆ ದಾಸರೆನ್ನು

ಹರಿಹರರ ಒಂದೇ ಸ್ಥಾನದಲಿ ಕಾಣುವೆನೆಂದು |
ಪರಮ ಭಕುತಿಯಿಂದ ಕ್ರೋಧಮುನಿಪ ||
ಧರಣಿಯೆಲ್ಲ ತಿರುಗಿ ಶುಕ್ಲವತೀ ತೀರಕೆ ಬರಲು |
ವಸಂತ ಕಾಲದಂತೆ ಪೊಳಿಯೇ||1||

ತಪಸಿ ತಪವನೆ ಮಾಡುತಿರಲು ಖರಾಟಖಳ |
ಉಪಹತಿ ಕೊಡುತಿಪ್ಪ ವರಬಲದಿ ||
ವಿಪುಳದೊಳಗಿವಗೆಲ್ಲಿ ಎದುರಾರು ಇಲ್ಲದಿರೆ |
ಸುಪರ್ಣಾದಿ ಮೊರೆ ಇಡಲು ಬೊಮ್ಮಗೆ||2||

ತಲೆದೂಗಿ ಪರಮೇಷ್ಠಿ ಹರಿಯ ಬಳಿಗೆ ಬಂದು |
ಖಳನ ಕೋಲಾಹಲವ ಬಿನ್ನೈಸಲು ||
ಪುಲಿತೊಗಲಾಂಬರನ ಸಹಿತ ಸರ್ವೋತ್ತಮನ |
ಒಲಿಮೆಯಿಂದ ಬಂದು ಸುಳಿದರಾಗಂದು ||3||

ದಾನವನ ಕೊಂದು ದೇವತೆಗಳ ಸುಖಬಡಿಸಿ |
e್ಞÁನಕ್ರೋಢಮುನಿ ಮನಕೆ ಪೊಳೆದು ||
ಆನಂದದಿಂದಲಿ ನಿಂದು ಮೆರೆದ ಲೀಲೆ |
ಏನೆಂಬೆನಯ್ಯ ಹರಿಹರ ವಿಚಿತ್ರಾ ||4||

ಶಿವನ ಸಾಲಿಗ್ರಾಮದೊಳಗೆ ಪ್ರವಿಷ್ಠ ಕೇ|
ಶವನು ತಾನೆ ಕಾಣೊ ಸ್ವಾತಂತ್ರನು ||
ಇವರು ಶಂಕರನಾರಾಯಣನೆಂಬೊ ಪೆಸರಿನಲಿ |
ಅವನಿಯೊಳು ಪ್ರಖ್ಯಾತರಾಗಿ ನಿಂದಿಹರೋ ||5||

ಹೀನ ಮಾನವರು ಇವರಿಗೆ
ಐಕ್ಯ ಪೇಳುವರು ಕಾಣುತಲಿದೆ
ಎರಡು ಮೂರುತಿಗಳು ನೋಳ್ಪರಿಗೆ |
ಶ್ರೀ ನಾರಾಯಣಗೆ ಈಶ ಸಮನೇ ||6||

ಚಕ್ರ ಶಂಖ ಗದೆ ಪದುಮ ಹರಿಗೆ ನೋಡು |
ಮುಕ್ಕಣ್ಣಗೆ ಡಮರುಗ ತ್ರಿಶೂಲವು ||
ಮುಖ್ಯ ದೇವತಿ ಹರಿ ಅವಾಂತರ ಶಿವನು |
ಶಕ್ರಾದ್ಯರೊಲಿದು ಭೇದವನು ಪೇಳುವರು ||7||

ಸತ್ಯಂ ವದವೆಂಬ ಶ್ರುತಿವರದು ಪೇಳುತಿದೆ |
ಭೃತ್ಯ ರುದ್ರನು ಕಾಣೊ ಲಕುಮಿವರಗೆ ||
ಸತ್ಯದಲಿ ಸಿದ್ಧವಯ್ಯ ಎಂದು ತಿಳಿದು |
ಸ್ತೌತ್ಯ ಮಾಡಿದವಗೆ ವೈಕುಂಠ ಪದವಿ ||8||

ಕ್ರೋಢ ಪರ್ವತವಿದೆ ತೀರ್ಥ ಪಾವನಕರ |
ನಾಡೊಳಗೆ ಕ್ಷೇತ್ರ ಉತ್ತಮ ಮಾನವಾ ||
ಪಾಡಿದರೆ ವಿಜಯವಿಠ್ಠಲರೇಯ ಒಲಿದು
ಕೂಡಾಡುವನು ದೃಢ ಭಕುತಿಯಿತ್ತು ಅನುದಿನಾ ||9||