ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ

Category: ವಚನಗಳು

Author: ಅಕ್ಕಮಹಾದೇವಿ

ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ
ಎನ್ನ ತನು ಶುದ್ಧವಾಯಿತ್ತು.

ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ
ಎನ್ನ ಮನ ಶುದ್ಧವಾಯಿತ್ತು.

ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ
ಎನ್ನ ಪ್ರಾಣ ಶುದ್ಧವಾಯಿತ್ತು.

ಅಯ್ಯಾ, ನಿಮ್ಮ ಅನುಭಾವಿಗಳು
ಎನ್ನ ಒರೆದೊರೆದು ಆಗುಮಾಡಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯಾ, ನಿಮಗಾನು ತೊಡಿಗೆಯಾದೆನು.