ಅಗ್ನಿ ಸರ್ವವ್ಯಾಪಕನಾಗಿರುವಂತೆ
Category: ವಚನಗಳು
Author: ಅಕ್ಕಮಹಾದೇವಿ
ಅಗ್ನಿ ಸರ್ವವ್ಯಾಪಕನಾಗಿರುವಂತೆ
ಚಿದ್ವಹ್ನಿರೂಪನಾದ ಶಿವನು ಸರ್ವವ್ಯಾಪಕನಾಗಿರ್ಪನು.
ಹೃದಯಕಮಲವು ಮುಕುರದೋಪಾದಿಯಲ್ಲಿ ಪ್ರಕಾಶಿಸುತಿರ್ದಪುದು.
ಆ ಕನ್ನಡಿಯೋಪಾದಿಯ ಹೃದಯಕಮಲದಲ್ಲಿ
ವ್ಯಾಪಕನಾದ ಶಿವನು,
ಆತ್ಮನೆನಿಸಿಕೊಂಡು ಪ್ರತಿಬಿಂಬಿಸುತಿರ್ದಪನು.
ವೇದೋಪನಿಷದ್ಗಾಯತ್ರಿ ಪ್ರಸಿದ್ಧವಾದೀ ರಹಸ್ಯವ
ಗುರೂಪದೇಶದಿಂ ತಿಳಿವುದಯ್ಯಶ್ರೀ ಚೆನ್ನಮಲ್ಲಿಕಾರ್ಜುನದೇವಾ.