ಅತ್ತೆ ಮಾಯೆ, ಮಾವ ಸಂಸಾರಿ,

Category: ವಚನಗಳು

Author: ಅಕ್ಕಮಹಾದೇವಿ

ಅತ್ತೆ ಮಾಯೆ, ಮಾವ ಸಂಸಾರಿ,
ಮೂವರು ಮೈದುನರು ಹುಲಿಯಂತವದಿರು,
ನಾಲ್ವರು ನಗೆವೆಣ್ಣು ಕೇಳು ಕೆಳದಿ.

ಐವರು ಭಾವದಿರನೊಯ್ವ ದೈವವಿಲ್ಲ.
ಆರು ಪ್ರಜೆಯತ್ತಿಗೆಯರ ಮೀರಲಾರೆನು.

ತಾಯೆ, ಹೇಳುವಡೆ ಏಳು ಪ್ರಜೆ ತೊತ್ತಿರ ಕಾಹು.
ಕರ್ಮವೆಂಬ ಗಂಡನ ಬಾಯ ಟೊಣೆದು,
ಹಾದರವನಾಡುವೆನು ಹರನಕೊಡೆ.

ಮನವೆಂಬ ಸಖಿಯ ಪ್ರಸಾದದಿಂದ
ಅನುಭಾವವ ಕಲಿತೆನು ಶಿವನೊಡನೆ
ಕರಚೆಲುವ ಶ್ರೀಶೈಲ ಚೆನ್ನಮಲ್ಲಿಕಾರ್ಜುನನೆಂಬಸಜ್ಜನ ಗಂಡನ ಮಾಡಿಕೊಂಡೆ