ಬಿಡು ಬಿಡು ಬಾಹ್ಯದೊಳು

Category: ಶ್ರೀಶಿವ

Author: ಸರ್ಪಭೂಷಣ ಶಿವಯೋಗಿ

ಮಾಂಡ್ -

ಬಿಡು ಬಿಡು ಬಾಹ್ಯದೊಳು ಡಂಭವ
ಮಾನಸದೊಳು ಎಡೆಬಿಡದಿರು ಶಂಭುವ |
ಮನದೊಳು ವಂಚಿಸಿ ಹೊರಗೆ ನೀ ಕೀರ್ತಿಯ
ಪಡೆದರೆ ಶಿವ ನಿನಗೊಲಿಯನು ಮರುಳೆ ||

ಭೀಮಪಲಾಸೀ -

ಜನಕಂಜಿ ನಡೆಕೊಂಡರೇನುಂಟು ಲೋಕದಿ
ಮನಕಂಜಿ ನಡೆಕೊಂಬುದೇ ಚಂದ |
ಜನರೇನ ಬಲ್ಲರು ಒಳಗಾಗೋ ಕೃತ್ಯವ
ಮನವರಿಯದ ಕಳ್ಳತನವಿಲ್ಲವಲ್ಲ||

ಭೈರವೀ -

ಮನದಲ್ಲಿ ಶಿವ ತಾ ಮನೆಮಾಡಿಕೊಂಡಿಹ
ಮನಮೆಚ್ಚಿ ನಡೆದರೆ ಶಿವ ತಾ ಮೆಚ್ಚುವ |
ಮನಕಂಜಿ ನಡೆಯದೆ ಜನಕಂಜಿ ನಡೆದರೆ
ಮನದಾಣ್ಮ ಗುರುಸಿದ್ಧ ಮರೆಯಾಗೋನಲ್ಲ ||